ಬೆಂಗಳೂರು, ಆ 17 ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಮಾಜಿ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ತಾವು ಮಾಜಿ ಗೃಹ ಗೃಚಿವ ಆರ್. ಅಶೋಕ್ ಹಾಗೂ ಬಿಜೆಪಿ ಸರಕಾರದ ವಿರುದ್ಧ ಮಾಡಿದ್ದ ಆರೋಪವನ್ನು ತಪ್ಪಾಗಿ ಅರ್ಥಿಸಲಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಟೆಲಿಪೋನ್ ಕದ್ದಾಲಿಕೆ ವಿಚಾರದಲ್ಲಿ ಹಿಂದಿನ ಗೃಹ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದು ಬಿಜೆಪಿ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರನ್ನು ಕುರಿತೇ ಹೊರತು ಎಂ.ಪಾಟೀಲ್ ಅವರನ್ನು ಉದ್ದೇಶಿಸಿ ಅಲ್ಲ, ಆದರೆ ಮಾಧ್ಯಮಗಳಲ್ಲಿ ಇದು ತಪ್ಪಾಗಿ ಬಿಂಬಿತವಾಗಿದೆ ಎಂದು ಶಿವಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಶನಿವಾರ ತಿಳಿಸಿದ್ದಾರೆ. ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ನಡೆದಿಲ್ಲ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಲಿ ಅಥವಾ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಾಗಲಿ ಈ ಕೆಲಸ ಮಾಡಿಲ್ಲ ಎಂದು ಸಂಗಮ ನೆರೆಪೀಡಿತ ಪ್ರದೇಶಕ್ಕೆ ಎರಡು ದಿನಗಳ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಮಾಧ್ಯಮದವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಾಗಿ ಈ ವಿಚಾರದಲ್ಲಿ ಎಂ.ಬಿ. ಪಾಟೀಲ್ ಅವರ ಹೆಸರನ್ನು ಎಳೆದು ತರುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಎಂ.ಬಿ. ಪಾಟೀಲ್ ಹಾಗೂ ತಮ್ಮ ನಡುವೆ ವೈಷಮ್ಯ ತಂದಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ಜಾತಿ ಲೇಪವನ್ನೂ ಹಚ್ಚಲಾಗಿದೆ. ಇಂಥ ಪ್ರಯತ್ನಗಳು ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಿವೆ. ಆದರೆ ಇಂಥ ಪ್ರಯತ್ನಗಳಿಂದ ತಮ್ಮಿಬ್ಬರ ಸಂಬಂಧ ಹಾಳು ಮಾಡಲು ಸಾಧ್ಯವಿಲ್ಲ. ಇಂಥ ಪ್ರಯತ್ನಗಳನ್ನು ದಾಟಿ ಮುನ್ನಡೆಯುವ ಮನೋಬಲ ಇಬ್ಬರಿಗೂ ಇದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಜನರ ಮತ್ತು ಸಂವಿಧಾನದ ಆಶೋತ್ತರಗಳಿಗೆ ವ್ಯತಿರಿಕ್ತವಾಗಿ ಅಧಿಕಾರ ಹಿಡಿದಿರುವ ರಾಜ್ಯದ ಬಿಜೆಪಿ ಮುಖಂಡರಿಗೆ ಪ್ರವಾಹದಿಂದ ತತ್ತರಿಸಿ ಹೋಗಿರುವ ರಾಜ್ಯದ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಜತೆಗೆ ಸಂಪುಟ ರಚನೆ ಮತ್ತಿತರ ಆಂತರಿಕ ವಿಚಾರಗಳಿಂದಲೂ ಜರ್ಝರಿತರಾಗಿ ಹೋಗಿದ್ದಾರೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಹಾಗೂ ರಾಜಕೀಯ ಕಾರಣಗಳಿಗಾಗಿ ಟೆಲಿಫೋನ್ ಕದ್ದಾಲಿಕೆ ಎಂಬ ಸುಳ್ಳು ಆರೋಪವನ್ನು ತೇಲಿ ಬಿಟ್ಟಿದ್ದಾರೆ. ಆದರೆ ಮೂರು ವಾರಗಳಿಂದ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ. ಅವರ ಗಮನ ಸೆಳೆಯಲು ಬಿಜೆಪಿ ಮುಖಂಡರು ಯಾವುದೇ ನಾಟಕ ಆಡಿದರೂ ಪ್ರಯೋಜನವಾಗುವುದಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಮುಖಂಡರು ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುವ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಲಿ. ಅದನ್ನು ಬಿಟ್ಟು ಈ ರೀತಿಯ ಸುಳ್ಳು ಆಪಾದನೆಗಳನ್ನು ಮಾಡಿಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇನ್ನಾದರೂ ಬಿಡಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.