ನವದೆಹಲಿ, ನ.5: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ವಿಶ್ವದ ಖ್ಯಾತ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಮಂಗಳವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡ ಬಳಿಕ ತಂಡದ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿರಾಟ್, ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಸಿಸಿ 2019 ಏಕದಿನ ವಿಶ್ವಕಪ್ ಹಾಗೂ ಐಸಿಸಿ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗವಾಗಿ 20 ಸಾವಿರ ರನ್ ಕಲೆ ಹಾಕಿದ್ದಾರೆ. ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿರುವ ಕೊಹ್ಲಿಗೆ, ಟೀಮ್ ಇಂಡಿಯಾದ ಮಾಜಿ ಆಟಗಾರರು, ಶುಭಕೋರಿದ್ದಾರೆ. ಸದ್ಯ ಬಾಂಗ್ಲಾದೇಶದ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್, ಕುಟಂಬದ ಜೊತೆ ರಜೆಯ ಮಜೆಯ ಸವಿಯುತ್ತಿದ್ದಾರೆ. ಭಾರತ ತಂಡದ ಪರ 82 ಟೆಸ್ಟ್, 239 ಏಕದಿನ, 72 ಟಿ-20 ಪಂದ್ಯಗಳನ್ನು ಆಡಿರುವ ಕೊಹ್ಲಿ ಸರಾಗವಾಗಿ ರನ್ ಕಲೆ ಹಾಕಬಲ್ಲರು. ಟೆಸ್ಟ್ ನಲ್ಲಿ 26 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 43 ಶತಕ ಬಾರಿಸಿ ಬೀಗಿದ್ದಾರೆ.