ಲೋಕದರ್ಶನ ವರದಿ
ಅಥಣಿ 26: ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಂಡ 17 ಶಾಸಕರನ್ನು ಮೊದಲು ಸ್ಪೀಕರ್ ನಂತರ ಸರ್ವೋಚ್ಚ ನ್ಯಾಯಾಲಯ ಅನರ್ಹಗೊಳಿಸಿದ್ದು, ಉಪ ಚುನಾವಣೆಯಲ್ಲಿ ಮತದಾರರು ಇವರ ವಿರುದ್ಧ ಮತ ಚಲಾಯಿಸಿ ಎಲ್ಲ 17 ಶಾಸಕರನ್ನೂ ಸಹ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಮತದಾರರಿಗೆ ಕರೆ ನೀಡಿದರು.
ಅವರು ಸ್ಥಳೀಯ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪ್ರಚಾರಾರ್ಥ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಮಹೇಶ ಕುಮಠಳ್ಳಿ ಶಾಸಕರಾಗಿ ಕೆಲ ತಿಂಗಳು ಕಳೆದಿದ್ದವು ಆಗಲೇ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಅಮೂಲ್ಯ ಸಮಯವನ್ನು 7 ಸ್ಟಾರ್ ಐಶಾರಾಮಿ ಹೊಟೇಲಗಳಲ್ಲಿಯೇ ಕಳೆದರು. ಅಥಣಿ ತಾಲೂಕಿನಲ್ಲಿ ಬರಗಾಲ ಬಿದ್ದು ಹನಿ ನೀರಿಗಾಗಿ ಜನ ಪರದಾಡುತ್ತಿದ್ದ ಸಮಯದಲ್ಲಿ ಮತ್ತು ಪ್ರವಾಹ ಬಂದು ತಿಂಗಳುಗಟ್ಟಲೇ ಜನ ಸಂಕಷ್ಟದಲ್ಲಿದ್ದಾಗಲೂ ಅಂದಿನ ಶಾಸಕ ಮಹೇಶ ಕುಮಠಳ್ಳಿ ಐಶಾರಾಮಿ ಹೊಟೇಲನಲ್ಲಿ ಮಜಾ ಮಾಡುತ್ತಿದ್ದರು. ಇಂತಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಮತದಾರ ಬಾಂಧವರು ಮಹೇಶ ಕುಮಠಳ್ಳಿ ವಿರುದ್ಧ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಂತೆ ಪಕ್ಕದ ಮಹಾರಾಷ್ಟ್ರದಲ್ಲಿಯೂ ಸಹ ಬಿಜೆಪಿಯ ಕೇಂದ್ರದ ನಾಯಕರು ಅಕ್ರಮ ಸರಕಾರ ರಚಿಸಲು ಮುಂದಾಗಿ ಸುಪ್ರಿಂ ಕೋರ್ಟನಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ ಸಂಖ್ಯಾ ಬಲ ಇಲ್ಲದಿದ್ದರೂ ಕೂಡ ನಾವು ಮತ್ತೆ ಸರಕಾರ ರಚಿಸುತ್ತೇವೆ ಎಂದು ಬಿಜೆಪಿ ಹೇಳಿಕೆ ನೀಡುತ್ತಿರುವುದು ಪ್ರಜಾ ಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಗಜಾನನ ಮಂಗಸೂಳಿ ಚುನಾವಣೆಯಲ್ಲಿ ಏಕೈಕ ಅರ್ಹ ಅಭ್ಯರ್ಥಿ ಇವರಿಗೆ ನಿಮ್ಮ ಅಮೂಲ್ಯ ಮತ ಚಲಾಯಿಸಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಾಜಿ ಗೃಹ ಸಚಿವ ಎಮ್.ಬಿ.ಪಾಟೀಲ ಮಾತನಾಡಿ, ಪ್ರವಾಹ ಸಮಸ್ಯೆಯಿಂದ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ಥರಿಗೆ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲ. ಮನೆ ಬಿದ್ದವರಿಗೆ ಮನೆ ನಿಮರ್ಿಸಿಕೊಳ್ಳಲು ಪರಿಹಾರ ಸಿಗುತ್ತಿಲ್ಲ. ಪರಿಹಾರ ಕೇಳಿದರೆ ಸರಕಾರದ ಬಳಿ ದುಡ್ಡು ಇಲ್ಲ ಎಂದು ಹೇಳುತ್ತಾರೆ ಆದರೆ ಬೇರೆ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲು ದುಡ್ಡಿನ ಕೊರತೆ ಇಲ್ಲ. ಪ್ರವಾಹದ ಸಂದರ್ಭದಲ್ಲಿ ಮಗನನ್ನ ಕಳೆದುಕೊಂಡ ತೀರ್ಥ ಗ್ರಾಮದ ತಾಯಿಗೆ ಸರಕಾರದಿಂದ ಒಂದು ಪೈಸೆ ಹಣವೂ ಕೂಡ ಇಲ್ಲಿಯವರೆಗೂ ಬಂದಿಲ್ಲ ಎಂದ ಅವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತನ್ನ ಕರ್ತವ್ಯ ನಿರ್ವಹಿಸದ ಮಹೇಶ ಕುಮಠಳ್ಳಿ ಇವರಿಗೆ ಮತ ಚಲಾಯಿಸದೇ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಇವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಪ್ರಜಾ ಪ್ರಭುತ್ವಕ್ಕೆ ಮತ್ತು ಭಾರತದ ಸಂವಿಧಾನಕ್ಕೆ ಮೋಸ ಮಾಡಿದವರಿಗೆ ಮತ್ತು ಈ ಚುನಾವಣೆ ಬರಲು ಕಾರಣರಾದವರಿಗೆ ಮತ ಚಲಾಯಿಸದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ ಇವುಗಳನ್ನು ಇಲ್ಲಿಯವರೆಗೂ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯ ಪರಿಣಾಮ ಬಗೆ ಹರಿಸಲು ಸಾಧ್ಯವಾಗಿಲ್ಲ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವ ಪ್ರಾಮಾಣಿಕ ಯತ್ನ ನಡೆಸುತ್ತೇನೆ ಎಂದು ಹೇಳಿದರು. ಮಾಜಿ ಶಾಸಕ ನಂಜಯ್ಯನಮಠ, ಮಾತನಾಡಿದರು.
ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಎಸ್.ಬಿ.ಘಾಟಗೆ, ಶರಣ ಪ್ರಕಾಶ ಪಾಟೀಲ ಸೇರಿದಂತೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಸರ್ವರನ್ನು ಸ್ವಾಗತಿಸಿದರು.