ಶಿರಹಟ್ಟಿ ಬಂದ್ ಯಶಸ್ವಿ : ವಿವಿಧ ಸಂಘಟನೆಗಳಿಂದ ಅಮಿತ್ ಶಾ ಕೇಂದ್ರ ಸಂಪುಟದಿಂದ ವಜಾಕ್ಕೆ ಆಗ್ರಹ

Shirahatti bandh successful: Various organizations demand dismissal of Amit Shah from central cabin

ಶಿರಹಟ್ಟಿ ಬಂದ್ ಯಶಸ್ವಿ : ವಿವಿಧ ಸಂಘಟನೆಗಳಿಂದ ಅಮಿತ್ ಶಾ ಕೇಂದ್ರ ಸಂಪುಟದಿಂದ ವಜಾಕ್ಕೆ ಆಗ್ರಹ 

ಶಿರಹಟ್ಟಿ : ಸಂವಿಧಾನದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಬಗ್ಗೆ ಕೇಂದ್ರ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದು,  ಅಮಿತ್ ಶಾ ಅವರು ಕೂಡಲೇ ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶಿರಹಟ್ಟಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮನವಿ ಸಲ್ಲಿಸಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಇದು ಅತ್ಯಂತ ಅಕ್ಷಮ್ಯ ಅಪರಾಧವಾಗಿದೆ. ಸಂವಿಧಾನದ ಮಹತ್ವ ತಿಳಿಯಲಾರದೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ಅಮಿತ್ ಶಾ ಅವರು ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಹಾಗೂ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. 

ಇದು ನಮ್ಮ ದೇಶದ ಇಡೀ ಜನತಗೆ ಬೇಸರ ತಂದಿದೆ. ಇಂತಹ ಅವಹೇಳನಾಕಾರಿ ಮಾತುಗಳನ್ನಾಡಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಸಂವಿಧಾನದಿಂದಲೇ ಅಮಿತ್ ಶಾ ಇಂದು ಗೃಹ ಸಚಿವರಾಗಲು ಕಾರಣ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವದರ ಬದಲಾಗಿ ಸಂವಿಧಾನ ಬರೆದ ಅಂಬೇಡ್ಕರ ಬಗ್ಗೆ ಅಸಹ್ಯವಾಗಿ ಮಾತನಾಡಿರುವದು ನಾಚಿಗೇಡಿತನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

  ಪಟ್ಟಣದ ಶ್ರೀ ಫಕೀರೇಶ್ವರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆೆಯಲ್ಲಿ ಅಮಿತ್ ಶಾ ಅವರ ಪ್ರತಿಕೃತಿಗೆ ಪಾದರಕ್ಷೆಗಳ ಸರಮಾಲೆ ಹಾಕುವದರೊಂದಿಗೆ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ಧಿಕ್ಕಾರದ ಘೋಷಣೆ ಕೂಗುತ್ತ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ನೆಹರೂ ವೃತ್ತದಲ್ಲಿ ಶಾ ಅವರ ಪ್ರತಿಕೃತಿಯನ್ನು ದಹಿಸಿದರು. ನಂತರ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಮಾರೋಪಗೊಂಡಿತು, ಇದೇ ಕಾರಣಕ್ಕಾಗಿ ಇಂದು ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವದರೊಂದಿಗೆ ವರ್ತಕರ ಸಂಘಗಳು ಪ್ರತಿಭಟನೆಗೆ ಸಾಥ್ ನೀಡಿದ್ದಲ್ಲದೇ, ಸಂಪೂರ್ಣ ಶಿರಹಟ್ಟಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದು, ಅಮಿತ್ ಶಾ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಲು ತಕ್ಷಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವದು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  

ಈ ಶಿರಹಟ್ಟಿ ಬಂದ್ ಪ್ರತಿಭಟನೆಯ ನೇತೃತ್ವ ವಹಿಸಿದ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ಭಾವಿಮನಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್‌.ಡಿ ಮಾಗಡಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ದೇವಕ್ಕ ಗುಡಿಮನಿ, ಕಾಂಗ್ರೆಸ್ ಯುವ ಮುಖಂಡ ಸುರೇಶ ಬೀರಣ್ಣವರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ದೃವರಾಜ ಹೊನ್ನಪ್ಪನವರ, ಗೀತಾ ಬೀರಣ್ಣವರ, ಭಾಗ್ಯಶ್ರೀ ಬಾಬಣ್ಣ,  ಕರವೇ ತಾಲ್ಲೂಕಾ ಘಟಕ ಅಧ್ಯಕ್ಷ ವೀರೇಶ ಪಸಾರದ, ಮಹಾಂತೇಶ ದಶಮನಿ, ನಜೀರ್ ಡಂಬಳ, ಹಮೀದ್ ಸನದಿ, ಪಪಂ ಸದಸ್ಯ ಮಂಜುನಾಥ ಗಂಟಿ, ಮಾಬುಸಾಬ ಲಕ್ಷ್ಮೇಶ್ವರ, ಬುಡನಶಾ ಮಕಾಂದರ, ಈರಣ್ಣ ಚವ್ಹಾಣ, ಮಹೇಂದ್ರ ಉಡಚಣ್ಣವರ, ಹೊನ್ನೇಶ ಪೋಟಿ, ಹಸನ್‌ಪೀರ ಪಾಟೀಲ, ದೇವೇಂದ್ರ ಶಿಂಧೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.