ತಮಿಳುನಾಡು : ಮಾವುತನನ್ನು ಕೊಂದ ದೇವಾಲಯದ ಆನೆ

ಮಧುರೈ, ಮೇ 25, ಮಧುರೈ ಜಿಲ್ಲೆಯ ಪ್ರಸಿದ್ಧ ಭಗವಾನ್ ಸುಬ್ರಮಣ್ಯ   ಸ್ವಾಮಿ ದೇವಸ್ಥಾನಕ್ಕೆ ಸೇರಿದ ಹೆಣ್ಣು ಆನೆ ದೈವಾನಿ ತನ್ನ ಮಾವುತನನ್ನು ತುಳಿದು   ಕೊಂದಿರುವ ದುರಂತ ಘಟನೆ ಜರುಗಿದೆ.ಭಾನುವಾರ ರಾತ್ರಿ ಮಾವುತ ಕಾಲಿಮುತ್ತು 14 ವರ್ಷ ವಯಸ್ಸಿನ   ಹೆಣ್ಣಾನೆಯನ್ನು ಸ್ನಾನಕ್ಕೆ   ಕರೆದೊಯ್ಯುವಾಗ ಈ ಘಟನೆ ನಡೆದಿದೆ.  ಆನೆ   ತನ್ನ ಸೊಂಡಿಲಿನಿಂದ ಕಾಲಿಮುತ್ತುವನ್ನು ಎಸೆದು ಮುಂಭಾಗದ ಕಾಲಿನಿಂದ ಮೆಟ್ಟಿತು ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡ ಮಾವುತನನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ,  ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಆನೆ, ಮಾವುತನ ಮೇಲೆ ದಾಳಿ ಮಾಡಿದ ನಂತರ, ದೇವಾಲಯದ   ಒಳಗಿದ್ದ ಜನರು ತೀವ್ರ ಭೀತಿಗೊಳಗಾಗಿದ್ದು, ಈ ವೇಳೆ ಅಲ್ಲಿಗೆ ಬಂದ ಮತ್ತೊಬ್ಬ   ಮಾವುತ, ಆನೆಯ ಮೇಲೆ ನೀರು ಸಿಂಪಡಿಸಿದ ನಂತರ ಅದು ಶಾಂತವಾಗಿದೆ.ದೈವಾನಿ ಏಳು   ವರ್ಷದವಳಿದ್ದಾಗ ಅಸ್ಸಾಂನಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ   ಕರೆತರಲಾಯಿತು. ಇದು ಮಾರ್ಚ್ 2018 ರಲ್ಲಿಯೂ ತನ್ನ ಮಾವುತರ ಮೇಲೆ ದಾಳಿ ಮಾಡಿದ ಇತಿಹಾಸವನ್ನು ಹೊಂದಿದೆ. ಇದು ಗಣಪತಿ   ಸುಬ್ರಮಣಿಯನ್ ಮತ್ತು ಕನಗಸುಂದರಂ ಹೆಸರಿನ ಮಾವುತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು.  ಕೆಲವು ತಿಂಗಳುಗಳ   ನಂತರ, ಆನೆ ಮತ್ತೆ ಮತ್ತೊಬ್ಬ ಮಾವುತನ  ಮೇಲೆ   ದಾಳಿ ಮಾಡಿತಾದರೂ, ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.