ಇನ್ನಿಂಗ್ಸ್ ಹಾಗೂ 57 ರನ್ ಗೆಲುವು ದಾಖಲಿಸಿದ ತಮಿಳುನಾಡು

ವಡೋದರಾ, ಫೆ.6 :    ಭರವಸೆಯ ಆಟಗಾರ ಕೃಷ್ಣಮೂರ್ತಿ ವಿಗ್ನೇಶ್ ಅವರ ಮಾರಕ ದಾಳಿಯ ಫಲವಾಗಿ ತಮಿಳುನಾಡು ರಣಜಿ ಟ್ರೋಫಿಯ ಎಲೈಟ್ “ಬಿ” ಗುಂಪಿನ ಪಂದ್ಯದಲ್ಲಿ ಬರೋಡಾ ತಂಡವನ್ನು ಇನ್ನಿಂಗ್ಸ್ ಹಾಗೂ 57 ರನ್ ಗಳಿಂದ ಮಣಿಸಿ ಬೋನಸ್ ಅಂಕವನ್ನು ಕಲೆ ಹಾಕಿತು.  

ಗುರುವಾರ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಂದ ಇನ್ನಿಂಗ್ಸ್ ಆರಂಭಿಸಿದ ಬರೋಡಾ ತಂಡ 259 ರನ್ ಗಳಿಗೆ ಆಲೌಟ್ ಆಯಿತು. ಬರೋಡಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಪ್ರಯತ್ನಕ್ಕೆ ತಮಿಳುನಾಡು ಬೌಲರ್ ಗಳು ಸೊಪ್ಪು ಹಾಕಲಿಲ್ಲ.  

ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ 95 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿದರೆ, ಅತೀತ್ ಶೇಠ್ 7 ಔಂಡರಿ, 3 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿದರು.  

ತಮಿಳುನಾಡು ತಂಡದ ಪರ ವಿಗ್ನೇಶ್ 62 ರನ್ ನೀಡಿ ಐದು ವಿಕೆಟ್ ಪಡೆದರು. ಎಂ.ಮೊಹಮ್ಮದ್ ಹಾಗೂ ಸಾಯಿ ಕಿಶೋರ್ ತಲಾ ಎರಡು ವಿಕೆಟ್ ಉರುಳಿಸಿದರು.