ಚೆನ್ನೈ, ಜ 6: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲನ ಅಣೆಕಟ್ಟು ನಿರ್ಮಾಣ ಸಂಬಂಧ ಕರ್ನಾಟಕ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ( ಡಿಪಿಆರ್)ಯನ್ನು ಕೂಡಲೇ ತಿರಸ್ಕರಿಸಿ, ವಾಪಸ್ ಕಳುಹಿಸಬೇಕು ಎಂದು ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರವನ್ನು ಸೋಮವಾರ ಆಗ್ರಹಿಸಿದೆ.
ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ತಮ್ಮ ಸಂಪ್ರದಾಯಿಕ ಭಾಷಣದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಅಂತರರಾಜ್ಯ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡು ಹಿತಾಸಕ್ತಿಗಳ ರಕ್ಷಣೆಯ ಕ್ರಮಗಳನ್ನು ತಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಪ್ರಕಟಿಸಿದ್ದಾರೆ.
ಕರ್ನಾಟಕ ಸರ್ಕಾರ ಮೇಕೇದಾಟು ಯೋಜನೆ ಸಂಬಂಧ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಯನ್ನು ಕೂಡಲೇ ತಿರಸ್ಕರಿಸಿ, ವಾಪಸ್ಸು ಕಳಿಸಬೇಕು ಎಂದು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಾಗಿ, ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ಕಣಿವೆಯಲ್ಲಿ ತಮಿಳುನಾಡು ಸರ್ಕಾರದ ಪೂರ್ವಾನುಮತಿ ಇಲ್ಲದೆ ಕರ್ನಾಟಕ ಯಾವುದೇ ನಿರ್ಮಾಣ ಚಟುವಟಿಕೆ ಕೈಗೆತ್ತಿಕೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರ ಪೆನ್ನಾರ್ ಕಣಿವೆ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಿದೆ. 2012ರ ಮೇ ತಿಂಗಳಲ್ಲಿ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಪೆನ್ನಾರ್ ಕಣಿವೆಯಲ್ಲಿ ಮಾರ್ಕಂಡೇಯ ನದಿ ನೀರು ತಿರುಗಿಸಿ ಜಲಾಶಯ ನಿರ್ಮಿಸುವ ಕರ್ನಾ ಟಕದ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ನಂತರ ಈ ವಿಷಯವನ್ನು ತಮಿಳುನಾಡು ಸರ್ಕಾರ ಹಲವು ಬಾರಿ ಕೇಂದ್ರದ ಮುಂದೆ ಪ್ರಸ್ತಾಪಿಸಿದೆ. ಅಂತಿಮವಾಗಿ 2018ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದು, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಅನುಸಾರ, ಪೆನ್ನಾರ್ ವಿವಾದವನ್ನು 1956ರ ಅಂತರಾಜ್ಯ ನದಿನೀರು ಜಲ ವಿವಾದಗಳ ಕಾಯ್ದೆಯಡಿ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸಬೇಕು ಎಂದು ತಮಿಳುನಾಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ವಿವರಿಸಿದ್ದಾರೆ.
ಪೆನ್ನಾರ್ ನದಿ ಕುರಿತ ಪ್ರಮುಖ ದಾವೆ ಸುಪ್ರೀಂ ಕೋರ್ಟ್ನಲ್ಲಿ ಈಗಲೂ ಬಾಕಿ ಉಳಿದುಕೊಂಡಿದ್ದು, ಹಾಗಾಗಿ ಆದಷ್ಟು ಶೀಘ್ರ ನ್ಯಾಯಮಂಡಳಿ ರಚಿಸಬೇಕೆಂದು ರಾಜ್ಯ ಸರ್ಕಾರ, ಕೇಂದ್ರವನ್ನು ಆಗ್ರಹಿಸಲಿದ್ದು, ತಮಿಳುನಾಡು ರಾಜ್ಯ ಸರ್ಕರದ ಪೂರ್ವಾನುಮತಿಯಿಲ್ಲದೆ ಪೆನ್ನಾರ್ ಕಣಿವೆಯಲ್ಲಿ ನದಿ ತಿರುವಿನ ಜಲಾಶಯ ನಿರ್ಮಾಣ ನಡೆಸದಂತೆ ಕರ್ನಾಟಕ ರಾಜ್ಯಕ್ಕೆ ನಿರ್ದೇಶನ ನೀಡಬೇಕು ರಾಜ್ಯಪಾಲರ ಭಾಷಣದಲ್ಲಿ ಒತ್ತಾಯಿಸಲಾಗಿದೆ.