ಕಾರವಾರ 05: ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಾರದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬರಬಹುದಾದ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳನ್ನು ಈಗಿನಿಂದಲೇ ಗುರುತಿಸಿಟ್ಟುಕೊಳ್ಳಬೇಕು. ಆ ಪ್ರದೇಶದಲ್ಲಿರುವ ಸರಕಾರಿ ಮತ್ತು ಖಾಸಗಿ ಬಾವಿಗಳು, ಬಾಡಿಗೆ ಬೋರ್ ವೆಲ್‌ಗಳು, ಬಾಡಿಗೆ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಬಹುದಾದ ಪ್ರದೇಶಗಳು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಪ್ರದೇಶಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚಿಸಿದರು.ಕುಡಿಯುವ ನೀರಿನ ಸರಬರಾಜು ಮಾಡಲು ಗುರುತಿಸಿರುವ ಮೂಲಗಳಲ್ಲಿನ ನೀರಿನ ಗುಣಮಟ್ಟದ ಕುರಿತಂತೆ ಪರೀಕ್ಷೆ ನಡೆಸುವಂತೆ ಸೂಚಿಸಿದ ಅವರು, ಯಾವುದೇ ಸಂದರ್ಭದಲ್ಲೂ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸುವ ಮೂಲಕ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಸರಬರಾಜು ಮಾಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಬಿಸಿಗಾಳಿಯ ವಾತಾವರಣ ಕಂಡುಬರುತ್ತಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುನ್ಸೂಚನೆಯಂತೆ ಮಾರ್ಚ್ 7 ರವರೆಗೆ ಈ ವಾತಾವರಣ ಕಂಡುಬರಲಿದ್ದು, ಈ ಅವಧಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ತಿಳಿಸಿದ ಅವರು, ಈ ಕುರಿತಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಉಂಟಾಗುವ ಮತ್ತು ಗುಡ್ಡ ಕುಸಿತ ಪ್ರದೇಶದಲ್ಲಿನ ಗ್ರಾಮಗಳೂ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ತಿಳಿಸಿದ ಅವರು, ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳು ಸೇರಿದಂತೆ ವಿಪತ್ತು ಎದುರಿಸಲು ಅಗತ್ಯವಿರುವ ಸಂಪೂರ್ಣ ಮಾಹಿತಿಯುಳ್ಳ ಯೋಜನೆಯ ವಿವರಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಈ ಬಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಸಾಕಷ್ಟು ಮುಂಚಿತವಾಗಿಯೇ ವಿಪತ್ತು ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುತ್ತಿದ್ದು, ಮುಂದೆ ಸಂಭವಿಸಬಹುದಾದ ಯಾವುದೇ ರೀತಿಯ ವಿಪತ್ತುಗಳನ್ನು ಅತ್ಯಂತ ಸಮರ್ಕವಾಗಿ ಎದುರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.