ಬೆಂಗಳೂರು, ಆ 7 ರಾಜ್ಯದಲ್ಲಿ ನೆರೆ, ಬರದಂತಹ ಗಂಭೀರ ಸಮಸ್ಯೆಗಳಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಏಕಪಾತ್ರಾಭಿನಯ [ಎನ್ ಮ್ಯಾನ್ ಶೋ] ಎಷ್ಟು ದಿನ ನಡೆಯುತ್ತದೆಯೋ ಕಾದು ನೋಡುತ್ತೇವೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಯಡಿಯೂರಪ್ಪ ಅವರಂತೆ ಆತುರ ಪಡುವುದಿಲ್ಲ. ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸುತ್ತಾರೋ ನಡೆಸಲಿ, ನಾವು ಎಲ್ಲವನ್ನೂ ಕಾದು ನೋಡುತ್ತೇವೆ ಎಂದರು.
ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಗಂಭೀರ ಸಂದರ್ಭದಲ್ಲೂ ಸಚಿವ ಸಂಪುಟ ರಚನೆಯಾಗಿಲ್ಲ. ಜನರ ಸಂಕಷ್ಟಕ್ಕೆ ಸಚಿವರು ಸ್ಪಂದಿಸಬೇಕಾಗಿತ್ತು. ಈಗ ಯಡಿಯೂರಪ್ಪ ಅವರಿಗೆ ಏನೇ ಕೇಳಿದರೂ ಅವರು ದೆಹಲಿಯತ್ತ ಬೊಟ್ಟ ಮಾಡುತ್ತಾರೆ. ಅವರು ವಿರೋಧ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಅವರ ಸರ್ಕಾರ ರಚನೆಯಾಗುವ ಮುನ್ನವೇ ರೈತರ ಕಾಳಜಿ, ಸಾಲ ಮನ್ನಾ ಎಂದು ಕೂಗಾಡುತ್ತಿದ್ದರು. ಅವರಂತೆ ನಾವು ಆತುರದಲ್ಲಿ ಹೇಳಿಕೆ ನೀಡುವುದಿಲ್ಲ. ಸರ್ಕಾರ ರಚನೆಯಾಗಿ 10 ದಿನ ಆದರೂ ಯಡಿಯೂರಪ್ಪ ಅವರದ್ದು ಇನ್ನೂ ಒನ್ ಮ್ಯಾನ್ ಶೋ ಆಗಿದ್ದು, ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸುತ್ತಾರೆ ನೋಡೋಣ. ಪಾಪ ಅವರಿಗೆ ಏನು ಕಷ್ಟ ಇದೆಯೋ ಎಂದರು.
ಯಡಿಯೂರಪ್ಪ ಅವರು ಬೇಕಾದರೆ 100 ದಿನ ಸಮಯ ತೆಗೆದುಕೊಳ್ಳಲಿ. ಅಧಿಕಾರ ಇಲ್ಲದಾಗ ರೈತರ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದ ಅವರು ಈಗ ಸಿಕ್ಕಿರುವ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ರಾಜ್ಯದ ಜನ ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತರಿದ್ದಾರೆ ಅವರು ಎಲ್ಲವನ್ನು ನೋಡುತ್ತಿದ್ದಾರೆ ಎಂದರು.
ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಆಗಮಿಸಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ನಾನು ಅವರ ಅಹವಾಲು ಆಲಿಸಿ ಅವರಿಗೆ ಧೈರ್ಯ ಹೇಳುತ್ತಿದ್ದೇನೆ. ಇನ್ನು ಪಕ್ಷದಲ್ಲಿನ ಹುದ್ದೆ ತೀರ್ಮಾನದ ಬಗ್ಗೆ ಹೈಕಮಾಂಡ್ ಸಮಿತಿ ರಚನೆ ಮಾಡಿದ್ದು, ಪದಾಧಿಕಾರಿಗಳ ನೇಮಕವನ್ನು ಅವರೇ ನೋಡಿಕೊಳ್ಳುತ್ತಾರೆ. ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದಾರೆ. ಅವರು ಏನಾದರೂ ಸಲಹೆ ಕೇಳಿದರೆ ಕೊಡುತ್ತೇನೆ. ಇಲ್ಲದಿದ್ದರೆ ತಮ್ಮ ಪಾಡಿಗೆ ತಮ್ಮ ಕೆಲಸ ನೋಡಿಕೊಳ್ಳುವುದಾಗಿ ಹೇಳಿದರು.