ಟೇಬಲ್ ಟೆನಿಸ್ ವಿಶ್ವಕಪ್: ಸತಿಯನ್ ಜ್ಞಾನಶೇಖರನ್ ಕನಸು ಭಗ್ನ

Satian Jnanasekharan

ಚೆಂಗ್ದು, ನ 30 -ಸ್ಟಾರ್ ಆಟಗಾರ ಸತಿಯನ್ ಜ್ಞಾನಶೇಖರನ್ ಅವರು ಇಲ್ಲಿ ನಡೆಯುತ್ತಿರುವ ಟೇಬಲ್ ಟೆನಿಸ್ ವಿಶ್ವಕಪ್ ಟೂರ್ನಿಯಲ್ಲಿ ಸೋಲು ಅನುಭವಿಸಿದರು. ಭಾರತದ ಪರ ಏಕೈಕ ಆಟಗಾರನಾಗಿ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ ಜ್ಞಾನಶೇಖರನ್ ಪ್ರಶಸ್ತಿ ಗೆಲ್ಲುವ ಕನಸಿಗೆ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತ ಭಗ್ನಗೊಳಿಸಿದರು.

ಶನಿವಾರ ನಡೆದ  ನಾಕೌಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ವಿಶ್ವದ 30ನೇ ಶ್ರೇಯಾಂಕಿತ, ಜರ್ಮನಿಯ ಟಿಮೊ ಬೊಲ್ ವಿರುದ್ಧ 1-4 (11-7, 8-11, 5-11, 9-11, 8-11) ಅಂತರದಲ್ಲಿ ಸೋಲು ಅನುಭವಿಸಿದ್ದರು. ಸತಿಯನ್ ಜ್ಞಾನಶೇಖರನ್ ಅವರ ಪಾಲಿಗೆ ಇದು ಚೊಚ್ಚಲ ವಿಶ್ವಕಪ್ ಆಗಿತ್ತು. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದರು.

ಪಂದ್ಯದ ಆರಂಭದ ಸೆಟ್ ನಲ್ಲಿ ಭಾರತದ ಆಟಗಾರ 1-0 ಮುನ್ನಡೆ ಸಾಧಿಸಿದ್ದರು. ಆದರೆ, ಅತ್ಯಂತ ಅನುಭವಿ ಜರ್ಮನಿಯ ಆಟಗಾರ ಎರಡನೇ ಸೆಟ್ ನಲ್ಲಿ ಬೇಗ ಪುಟಿದೆದ್ದು ಸಮಬಲ ಸಾಧಿಸಿದರು. ನಂತರ, ನಾಲ್ಕು ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. ಆ ಮೂಲಕ ಸೆಮಿಫೈನಲ್ಸ್ ಪ್ರವೇಶ ಮಾಡಿದರು.

 ಶುಕ್ರವಾರ ಸತಿಯನ್ ಜ್ಞಾನಶೇಖರನ್ ಅವರು ಹೆಚ್ಚುವರಿ ಶ್ರೇಯಾಂಕಿತ  ಫ್ರಾನ್ಸ್ ನ ಸಿಮೋನ್ ಗೌಝಿ ವಿರುದ್ಧ 11-13, 9-11, 11-8, 14-12, 7-11, 11-5, 11-8 ಅಂತರದಲ್ಲಿ ಜಯ ಸಾಧಿಸಿದ್ದರು. ನಂತರದ ಪಂದ್ಯದಲ್ಲಿ ಡೆನ್ಮಾರ್ಕ್ ನ  ವಿಶ್ವದ 24ನೇ ಶ್ರೇಯಾಂಕಿತ ಜೋನಾಥನ್ ಗ್ರೊಥ್ ವಿರುದ್ಧ 11-9, 7-11, 11-5, 11-6, 11-2 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಗೆ ಪ್ರವೇಶ ಮಾಡಿದ್ದರು.