ಬೆಂಗಳೂರು,ಫೆ.14: ಆಂಧ್ರ ಪ್ರದೇಶದ ಮಾದರಿಯಲ್ಲಿ ಸಾರಿಗೆ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಬಜೆಟ್ ನಲ್ಲಿ ಪ್ರಸ್ತಾವನೆಯನ್ನಿಡಬೇಕೆಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಮನ್ವಯ ಕನ್ನಡ ಸಂಘದ ಗೌರವಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ ಎಸ್ ಆರ್ ಟಿಸಿ ಸಾರಿಗೆ ಸಾಂಸ್ಥೆಯಲ್ಲಿ ಒಟ್ಟು 1 ಲಕ್ಷದ 26 ಸಾವಿರ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕ, ನಿರ್ವಾಹಕ, ಮೆಕಾನಿಕಲ್ ಹಾಗೂ ಇನ್ನಿತರ ಕಾರ್ಮಿಕರಿಗೆ ಇಂದಿಗೂ ಉದ್ಯೋಗ ಭದ್ರತೆ ಇಲ್ಲ. ಜೊತೆಗೆ ಸರ್ಕಾರಿ ಸಂಸ್ಥೆ ನೌಕರರಿಗೆ ಮತ್ತು ಸಾರಿಗೆ ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಆಂದ್ರಪ್ರದೇಶದ ಮಾದರಿಯಲ್ಲಿ ಸಾರಿಗೆ ಕಾರ್ಮಿಕರನ್ನು ಸಾರ್ಕಾರಿ ನೌಕರರನ್ನಾಗಿ ಮಾಡುವ ಕುರಿತು ಪ್ರಸ್ತಾಪ ಮಾಡಬೇಕೆಂದು ಆಗ್ರಹಿಸಿದರು. ಕಳೆದ ವರ್ಷ ನಾಲ್ಕು ನಿಗಮಗಳ ಸಾರಿಗೆ ಕಾರ್ಮಿಕರನ್ನು ಸರ್ಕಾರದಲ್ಲಿ ವಿಲೀನ ಮಾಡುವ ಬಗ್ಗೆ ರಾಜ್ಯ ಸರ್ಕಾರವು ಸಮಿತಿ ರಚನೆ ಮಾಡಿ ವರದಿ ನೀಡುವಂತೆ ನಿದರ್ಶನ ನೀಡಲಾಗಿತ್ತು. ಆದರೆ ಸಮಿತಿಯು ಐದು ತಿಂಗಳಾದರೂ ಸರ್ಕಾರಕ್ಕೆ ವರದಿಯನ್ನು ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಸಮಿತಿಯನ್ನು ಕೂಡಲೇ ರದ್ದುಪಡಿಸಿ ಸಾರಿಗೆ ಕಾರ್ಮಿಕರ ಬೇಡಿಕೆಗಳಿಗೆ ಅನುಗುಣವಾಗಿ ಸಾರಿಗೆ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.