ಟಿ-20 ತ್ರಿಕೋನ ಸರಣಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ಮೆಲ್ಬೋರ್ನ್, ಫೆ 7, ರಾಜೇಶ್ವರಿ ಗಾಯಕ್ವಾಡ್(23ಕ್ಕೆ 3) ಅವರ ಮಾರಕ ದಾಳಿಯ ಹೊರತಾಗಿಯೂ ನತಾಲಿಯಾ ಸೀವಿಯರ್ (50 ರನ್) ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಟಿ-20 ಮಹಿಳಾ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ವಿರುದ್ಧ 4 ವಿಕೆಟ್ ಗಳಿಂದ ಜಯ ಸಾಧಿಸಿತು.ಇಲ್ಲಿನ ಜಂಕ್ಷನ್ ಓವಲ್ ಅಂಗಳದಲ್ಲಿ ಭಾರತ ನೀಡಿದ್ದ 124 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 28 ರನ್ ಇರುವಾಗಲೇ ಎಮಿ ಎಲ್ಲೆನ್ ಜೋನ್ಸ್ (1), ಡೇನಿಯಲ್ ವ್ಯಾಟ್ (14) ಹಾಗೂ ಕಥೆರಿನ್ ಬ್ರಂಟ್(8) ಅವರ ವಿಕೆಟ್ ಬಹುಬೇಗ ಉರುಳಿತು. ನಾಯಕಿ ಹೀದರ್ ನೈಟ್ 18 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು.

  ಆದರೆ, ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ನತಾಲಿಯಾ ಸೀವಿಯರ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಕೇವಲ 38 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿದರು. ಆ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದರು. ಆದರೆ, ಕೊನೆಯಲ್ಲಿ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ವಿಕೆಟ್ ಕೊಟ್ಟರು. ಕೊನೆಯಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಫ್ರಾನ್ ವಿಲ್ಸನ್ 20 ರನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಟ್ಟಾರೆ, ಇಂಗ್ಲೆಂಡ್ 18.5 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಗೆಲುವಿನ ನಗೆ ಬೀರಿತು.

 ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 8 ರನ್ ಗಳಿಸಿ ಔಟಾಗಿದ್ದರು. ಆದರೆ, ಸ್ಮೃತಿ ಮಂಧಾನ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಕೇವಲ 40 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಯೊಂದಿಗೆ 45 ರನ್ ಚಚ್ಚಿದ್ದರು. ಜೆಮಿಮಾ ರೊಡ್ರಿಗಸ್ 23, ನಾಯಕಿ ಹರ್ಮನ್ ಪ್ರಿತ್ ಕೌರ್ 14 ರನ್ ಗಳಿಸಿದ್ದರು. ಇಂಗ್ಲೆಂಡ್ ಪರ ಅನ್ಯ ಶ್ರುಬ್ಸೊಲೆ ಮೂರು ಹಾಗೂ ಕಥೇರಿನ್ ಬ್ರಂಟ್ ಎರಡು ವಿಕೆಟ್ ಪಡೆದಿದ್ದರು.

 ಸಂಕ್ಷಿಪ್ತ ಸ್ಕೋರ್

ಭಾರತ(ಮ): 20 ಓವರ್‌ಗಳಿಗೆ 123/6 (ಸ್ಮೃತಿ ಮಂಧಾನ 45, ಜೆಮಿಮಾ ರೊಡ್ರಿಗಸ್ 23, ಹರ್ಮನ್‌ಪ್ರಿತ್ ಕೌರ್ 14, ಅನ್ಯ ಶ್ರಬ್ಸೊಲೆ 31 ಕ್ಕೆ 3, ಕಥೆರಿನ್ ಬ್ರಂಟ್ 23 ಕ್ಕೆ 2)

  ಇಂಗ್ಲೆಂಡ್ (ಮ): 18.5 ಓವರ್‌ಗಳಿಗೆ 124/6 (ನತಾಲಿಯಾ ಸೀವಿಯರ್ 50, ಫ್ರಾನ್ ವಿಲ್ಸನ್ ಔಟಾಗದೆ 20; ರಾಜೇಶ್ವರಿ ಗಾಯಕ್ವಾಡ್ 23 ಕ್ಕೆ 3, ರಾಧ ಯಾದವ್ 24 ಕ್ಕೆ 1)