ಲಾಹೋರ್, ಅ 10: ಪಾಕಿಸ್ತಾನದ ವಿರುದ್ಧ ಟಿ-20 ಸರಣಿ ಗೆಲುವು ಯುವ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರುಮೇಶ್ ರತ್ನಾಯಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಗಡ್ಡಾಫಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಬಳಿಕ ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಆತಿಥೇಯ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಸರಣಿ ಸೋತು ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತು. ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದ ಶಾಲಾ ವ್ಯವಸ್ಥೆ ಅತ್ಯುತ್ತಮವಾಗಿದೆ. ಯಾರೆಲ್ಲ ಪಂದ್ಯಗಳನ್ನು ಕುಳಿತು ವೀಕ್ಷಿಸುತ್ತಾರೆ. ನಿಜಕ್ಕೂ ಅವರಿಗೆ ತಂಡದ ಆಟಗಾರರ ಪ್ರದರ್ಶನ ಮಾದರಿಯಾಗಲಿದೆ. ಟಿ-20 ಸರಣಿಯ 3-0 ಕ್ಲೀನ್ ಸ್ವೀಪ್ ಖಂಡಿತ ಯುವ ಆಟಗಾರರ ಭವಿಷ್ಯಕ್ಕೆ ಸ್ಫೂರ್ತಿ ತುಂಬಲಿದೆ ಎಂದು ಹೇಳಿದರು. ಪಾಕಿಸ್ತಾನ ವಿರುದ್ಧದ ಫಲಿತಾಂಶವೂ ಆಟಗಾರರ, ಸಹಾಯಕರ ಹಾಗೂ ಕೋಚ್ಗಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಬಹುದು ಎಂದರು. ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಸೋಲು ಅನುಭವಿಸಿದ ಬಳಿಕ ಪುಟಿದೆದ್ದ ಲಂಕಾ ತಂಡ ಚುಟುಕು ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಅಕ್ಟೋಬರ್ 27 ರಂದು ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲಿದೆ.