ವನಿತೆಯರ ಟಿ-20 ಕ್ರಿಕೆಟ್: ಭಾರತಕ್ಕೆ ಐದು ವಿಕೆಟ್ ಜಯ

ಸೂರತ್, ಅ.4:  ನಾಯಕ ಹರ್ಮನ್ ಪ್ರಿತ್ ಕೌರ್ (34 ಅಜೇಯ) ಹಾಗೂ ರಾಧಾ ಯಾದವ್ (23ಕ್ಕೆ 3) ಭರ್ಜರಿ ಪ್ರದರ್ಶನದ ಬಲದಿಂದ ಆತಿಥೇಯ ಭಾರತ ವನಿತೆಯರ ತಂಡ 5 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಆರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.  ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ8 ವಿಕೆಟ್ ಗೆ 98 ರನ್ ಕಲೆ ಹಾಕಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ 17.1 ಓವರ್ ಗಳಲ್ಲಿ 5 ವಿಕೆಟ್ ಗೆ 99 ರನ್ ಬಾರಿಸಿ ಗೆಲುವು ಸಾಧಿಸಿತು.  ದಕ್ಷಿಣ ಆಫ್ರಿಕಾ ಪರ ಲಾರಾ ವೊಲ್ವಾರ್ಡ 17, ಲಿಜೆಲ್ ಲೀ 16, ಲಾರಾ ಗುಡಾಲ್ 15 ರನ್ ಬಾರಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಭಾರತದ ಪರ ರಾಧಾ ಯಾದವ್ 4 ಓವರ್ ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು. ದೀಪ್ತಿ ಶರ್ಮಾ 19 ರನ್ ನೀಡಿ 2 ವಿಕೆಟ್ ಪಡೆದರು.   ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತದ ಆರಂಭ ಕಳಪೆಯಾಗಿತ್ತು. ಮೇಲ್ಪಂಕ್ತಿಯ ಮೂರು ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಹರ್ಮನ್ ಪ್ರಿತ್ ಕೌರ್ ಹಾಗೂ ದೀಪ್ತಿ ಶರ್ಮಾ ನಾಲ್ಕನೇ ವಿಕೆಟ್ ಗೆ 50ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ದೀಪ್ತಿ 16 ರನ್ ಗಳಿಗೆ ಔಟ್ ಆದರು. ಕೊನೆಯ ವರೆಗೂ ಸ್ಥಿರ ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರಿತ್ ಕೌರ್ 32 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 34 ರನ್ ಬಾರಿಸಿದರು. ಆಫ್ರಿಕಾ ಪರ ಶಬ್ನಿಮ್ ಇಸ್ಮಾಯಿಲ್ ಎರಡು ವಿಕೆಟ್ ಪಡೆದರು.