ದುಬೈ, ಫೆ.3 : ನ್ಯೂಜಿಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಹಾಗೂ ಜಸ್ಪ್ರಿತ್ ಬುಮ್ರಾ ಅವರ ಶ್ರೇಯಾಂಕದಲ್ಲಿ ಭರ್ಜರಿ ಏರಿಕೆ ಆಗಿದೆ.
ಸೋಮವಾರ ಬಿಡುಗಡೆ ಗೊಂಡ ನೂತನ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ರಾಹುಲ್ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕಿವೀಸ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ 224 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ. ರಾಹುಲ್ ನಾಲ್ಕನೇ ಸ್ಥಾನ ಏರಿಕೆ ಆಗಿದ್ದು, ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ 10, ಶ್ರೇಯಸ್ ಅಯ್ಯರ್ 55, ಮನೀಷ್ ಪಾಂಡೆ 58ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಒಂಬತ್ತನೇ ಸ್ಥಾನ ತಲುಪಿದ್ದಾರೆ. ಈ ಮೂಲಕ ಬ್ಲ್ಯೂ ಬಾಯ್ಸ್ ತಂಡದ ಮೂವರು ಆಟಗಾರರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ನ್ಯೂಜಿಲೆಂಡ್ ವಿರುದ್ಧ ಮಾರಕ ದಾಳಿ ನಡೆಸಿದ್ದರು. ಈ ಪ್ರದರ್ಶನದ ಫಲವಾಗಿ ಬುಮ್ರಾ 11ನೇ ಸ್ಥಾನ ತಲುಪಿದ್ದಾರೆ. ಯಜುವೇಂದ್ರ ಚಹಾಲ್ 30, ಶಾರ್ದೂಲ್ ಠಾಕೂರ್ 57, ನವದೀಪ್ ಸೈನಿ 71, ರವೀಂದ್ರ ಜಡೇಜಾ 76ನೇ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ 16, ಟೀಮ್ ಸೆಫಿರ್ಟ್ 34, ರಾಸ್ ಟೇಲರ್ 39 ಸ್ಥಾನದಲ್ಲಿದ್ದಾರೆ. ಇನ್ನು ಇಶ್ ಸೋದಿ 13ನೇ ಸ್ಥಾನ ಹೊಂದಿದ್ದಾರೆ.