ಚೆನ್ನೈ, ನ 11 : ಚುನಾವಣಾ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಮೂಲಕ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ತನ್ನದೇ ಆದ ಜನಪ್ರಿಯತೆ, ವ್ಯಕ್ತಿತ್ವ, ಛಾಪು ಮೂಡಿಸಿಕೊಂಡಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ ಎನ್ ಶೇಷನ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಐ ಎ ಎಸ್ ಅಧಿಕಾರಿಯೂ ಆಗಿದ್ದ ಅವರು, 1960 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ನ ವಿದ್ಯಾರ್ಥಿಯಾಗಿದ್ದರು. ಹೇಳಿ ಕೇಳಿ ಜಗತ್ತಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದವರ ಪೈಕಿ ಬಹುಪಾಲು ಜನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಹೊರಬಂದವರೇ ಆಗಿದ್ದಾರೆ ಎಂಬುದು ಗಮನಿಸಬೇಕಾದ ಮಹತ್ವದ ಸಂಗತಿ. ನೊಬೆಲ್ ಪ್ರಶಸ್ತಿಗಳನ್ನು ಪಡೆಯುವಂತಹ ಶಕ್ತಿ, ಸಾಮಥ್ರ್ಯ ಮತ್ತು ವಾತಾವರಣ ನಿರ್ಮಾಣ ಮಾಡುವಂತಹ ಶೈಕ್ಷಣಿಕ ವಾತಾವರಣ ಹೊಂದಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿರುವುದು ಶೇಷನ್ ಅವರ ಹೆಗ್ಗಳಿಕೆಯಾಗಿತ್ತು. ತಮಿಳುನಾಡಿನ ಮತ್ತೊಬ್ಬ ರಾಜಕಾರಣಿ ಡಾ. ಸುಬ್ರಮಣಿಯನ್ ಸ್ವಾಮಿ ಸಹ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ. ಟಿ.ಎನ್.ಶೇಷನ್ ಕೇರಳದಲ್ಲಿ ಹುಟ್ಟಿದರೂ, ತಮಿಳುನಾಡು ಕೇಡರ್ ಐ ಎ ಎಸ್ ಅಧಿಕಾರಿಯಾಗಿದ್ದರು.