ಬೆಂಗಳೂರು, ಮೇ 20, ಲಾಕ್ ಡೌನ್‌ನಿಂದಾಗಿ ಸ್ಥಗಿತಗೊಂಡಿರುವ ಕ್ರೀಡಾ ಚಟುವಟಿಕೆಗಳನ್ನು ಪುನಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಕೆಲವು ಕ್ರೀಡೆಗಳಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಈಜುಕೊಳ, ಜಿಮ್ ಹೊರತುಪಡಿಸಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಅಂತರ ಕಾಯ್ದುಕೊಳ್ಳಬಹುದಾದ ಕ್ರೀಡೆಗಳಿಗೆ ಅವಕಾಶ ದೊರೆಯಲಿದೆ ಎಂದು ಸಿ.ಟಿ.ರವಿ ತಿಳಿಸಿದರು.ಕಬಡ್ಡಿ ಕ್ರೀಡೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕಬಡ್ಡಿಗೆ ಅವಕಾಶ ನೀಡಿಲ್ಲ. ಕೆಲವು ಷರತ್ತುಗಳನ್ನು ವಿಧಿಸಿ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಟಿಶ್ಯೂ ಪೇಪರ್ ಕಡ್ಡಾಯಗೊಳಿಸಲಾಗಿದೆ. ಪ್ರೇಕ್ಷಕರಿಗೆ ಅವಕಾಶ ಇಲ್ಲದೇ ಕ್ರೀಡೆಗಳು ನಡೆಯಬಹುದು. ಕ್ಲಬ್ ಗಳಲ್ಲಿ ಅಂತರ ಕಾಯ್ದುಕೊಂಡು ಸ್ಫೋರ್ಟ್ಸ್ ನಡೆಸಬಹುದು ಎಂದು ಅವರು ಹೇಳಿದರು.
ಜೂನ್ ಒಂದರವರೆಗೆ ಜಿಮ್, ಸ್ವಿಮ್ಮಿಂಗ್, ಕಬಡ್ಡಿ, ಕುಸ್ತಿಗೆ ಅವಕಾಶ ಇಲ್ಲ. ಉಳಿದೆಲ್ಲಾ ಕ್ರೀಡೆಗಳಿಗೆ ಅವಕಾಶ ನೀಡಲು ಸರ್ಕಾರ ಸಮ್ಮತಿ ನೀಡಿದೆ. ಫಿಟ್ನೆಸ್ ಸೆಂಟರ್ ಗಳಲ್ಲಿ ವೃತ್ತಿಪರರಿಗೆ ಅವಕಾಶ ಕೊಡಬೇಕು ಎನ್ನುವ ಮನವಿ ಬಂದಿದೆ. ಆದರೆ ಜೂನ್ ಒಂದರವರೆಗೆ ಅವಕಾಶ ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ಹೇಳಿದರು.ಐಪಿಎಲ್ ನಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್ ಹಣವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಾರದು ಎಂಬ ಕಾಂಗ್ರೆಸ್ ಶಾಸಕ ಜಮೀರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಜಾತ್ಯತೀತ ನೀತಿಗೆ ವಿರುದ್ಧವಾದುದು. ಮಾನವೀಯತೆಗೆ ವಿರುದ್ಧವಾಗಿ ಜಾತಿಯನ್ನು ಪ್ರತಿಬಿಂಬಿಸುವ ಹೇಳಿಕೆ ಕೊಟ್ಟಿದ್ದಾರೆ. ಇದು ಜಮೀರ್ ಹೇಳಿಕೆಯೋ, ಕಾಂಗ್ರೆಸ್ ಪಕ್ಷದ ಹೇಳಿಕೆಯೋ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನವರು ಯಾರೂ ಇದರ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿಲ್ಲ. ಮತಾಂಧತೆಯ ಉನ್ಮತ್ತತೆಯಲ್ಲಿ ಬಡ ಬಡಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವಕ್ಫ್ ಬೋರ್ಡ್ ಸರ್ಕಾರಕ್ಕಿಂತ ದೊಡ್ಡದಲ್ಲ. ವಕ್ಫ್ ಬೋರ್ಡ್ ಗೆ ಕೊಡುವುದು ಸಾರ್ವಜನಿಕರ ಹಣ. ಅವರು ಜಿನ್ನಾ ಮಾನಸಿಕತೆಯಿಂದ ಇನ್ನೂ ಹೊರ ಬಂದಿಲ್ಲ. ಜಕಾತ್ ಕೊಟ್ಟು ಡೆಪಾಸಿಟ್ ಮಾಡಿರುವ ಹಣ ಅಲ್ಲ. ಜಮೀರ್ ಅವರು ಕೊಡುವ ಜಕಾತ್ ಹಣವನ್ನು ನಾವು ಕೇಳುವುದಿಲ್ಲ. ವಕ್ಫ್ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಹೇಳುವ ಅಧಿಕಾರ ಜಮೀರ್ ಗೆ ಇಲ್ಲ. ಅವರ ಜಾತ್ಯತೀತತೆಯ ಮಾತು ಕೇವಲ ನಾಟಕ ಎಂದು ಜಮೀರ್ ವಿರುದ್ಧ ಸಿ.ಟಿ ರವಿ ಹರಿಹಾಯ್ದರು. ಎಪಿಎಂಸಿ ಕಾಯ್ದೆ ಯುಪಿಎ ಸರ್ಕಾರ ಇದ್ದಾಗಲೇ 16 ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಕೇವಲ ವಿರೋಧಿಸಬೇಕೆಂದೇ ವಿರೋಧಿಸುವುದು ಸರಿಯಲ್ಲ. ಹೆಚ್ಚು ಮಾರುಕಟ್ಟೆ ಸ್ಥಾಪನೆ ಆದರೆ ರೈತನಿಗೆ ಲಾಭ ಆಗುತ್ತೋ, ನಷ್ಟ ಆಗಿತ್ತೋ..? ಎಂದು ಪ್ರಶ್ನಿಸಿದ ಅವರು, ಎಪಿಎಂಸಿಗಳು ದಲ್ಲಾಳಿ ಕೇಂದ್ರಿತ ಮಾರುಕಟ್ಟೆಗಳಾಗಿ ಪರಿವರ್ತನೆ ಆಗಿರುವುದು ಸುಳ್ಳಾ..?. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಸಂಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ದ ಸಿ.ಟಿ ರವಿ ವ್ಯಂಗ್ಯವಾಡಿದರು.