ಕುಮಟಳ್ಳಿಗೆ ತಪ್ಪಿದ ಸಚಿವ ಸ್ಥಾನ: ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

ಬೆಂಗಳೂರು, ಫೆ.6, ಸಚಿವ ಸಂಪುಟದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಅವಕಾಶ ನೀಡದ್ದಕ್ಕೆ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ. ಆದರೆ ಕುಮಟಳ್ಳಿ ಅವರನ್ನು ಹೊರಗಿಡಲಾಗಿದೆ. ಇದರಿಂದ ಸಮುದಾಯಕ್ಕೆ ನಿರಾಶೆಯಾಗಿದೆ. ಇದರಿಂದ ಸಮಾಜದಲ್ಲಿ ಅಸಮಾಧಾನ ಉಂಟಾಗಿದೆ. ಸಮಾಜದ ಹಲವಾರು ಮಂದಿ ತಮಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಸಮಾಜದವರು ಯಾರು ಧೃತಿಗೆಡಬಾರದು. ಯಾರೂ ಸಹ ಬೇಸರ ಮಾಡಿಕೊಳ್ಳಬಾರದು. ಆದಷ್ಟು ಬೇಗ ಅನ್ಯಾಯವನ್ನು ಸರಿಪಡಿಸುವ ವಿಶ್ವಾಸವಿದೆ ಎಂದು ಸಮಾಧಾನ ಪಡಿಸಿದ್ದಾರೆ.

ಮಹೇಶ್ ಕುಮಟಳ್ಳಿ ಅವರಿಗೆ ರಮೇಶ್ ಜಾರಕಿಹೊಳಿ ಬೆಂಬಲ ನೀಡಬೇಕು. ಕುಮಟಳ್ಳಿ ಪರ ಜಾರಕಿಹೊಳಿ ನಿಲ್ಲಬೇಕು.ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿಯವರು ಕೇಂದ್ರ ವರಿಷ್ಠರ ಮನವೊಲಿಸಿ ಮಹೇಶ್ ಅವರಿಗೆ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.ಈ ಮಧ್ಯೆ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪಕ್ಷದ ನಿರ್ಧಾರದಿಂದ ಬೇಸರವವಾಗಿದೆ. ಆದರೂ ಹಿರಿಯ ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ರಮೇಶ್ ಜಾರಕಿಹೊಳಿಗೆ ತಿಳಿಸಿದ್ದೇನೆ. ನನಗೆ ಮಂತ್ರಿಸ್ಥಾನ ತಪ್ಪಲು ಯಾರು ಕಾರಣ? ಎಂಬಿತ್ಯಾದಿ ವಿವರವನ್ನು ಯಡಿಯೂರಪ್ಪನವರ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಕೈ ಬಿಟ್ಟಿದ್ದಾರೆ. ಮಂತ್ರಿ ಸ್ಥಾನ ನೀಡುವುದು ಕಷ್ಟ ಎಂಬುದನ್ನು ತಿಳಿಸಿದ್ದಾರೆ. ಅದಕ್ಕೆ ಕಾರಣ ಗೊತ್ತಿಲ್ಲ. ರಾಜಕೀಯ ಕಾರಣಗಳನ್ನು ತಿಳಿಸಲು ಅವರಿಗೂ ಕಷ್ಟವಾಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ.

ಮಂತ್ರಿ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಟೆನ್ಷನ್ ಇಲ್ಲ, ಮಂತ್ರಿ ಆಗಿಲ್ಲ ಎನ್ನುವುದು ಸ್ವಲ್ಪ ನೋವಾಗುತ್ತದೆ ಅಷ್ಟೆ. ನಾನು ಹಲವಾರು ವರ್ಷಗಳಿಂದ ರಾಜಕೀಯದಲ್ಲೇ ಇದ್ದೇನೆ. ಗೌರವಯುತ ಸ್ಥಾನ ಸಿಕ್ಕಿತು ಎಂದರೆ ಸಂತೋಷವಾಗುತ್ತದೆ. ನಾನು ಕೂಡ ಮನುಷ್ಯನೇ ಅಲ್ಲವೇ? ಎಂದಿದ್ದಾರೆ. ಪಕ್ಷ ಬಿಟ್ಟಿರುವವರು ಬೀದಿಗೆ ಬೀಳುತ್ತಾರೆ ಎಂದು ಕಾಂಗ್ರೆಸ್​ ನಾಯಕರು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಮಹೇಶ್ ಕುಮಟಳ್ಳಿ , ಬಿಜೆಪಿ ಪಕ್ಷಕ್ಕೆ ಮುಜುಗರ ಆಗುವಂತೆ ಮಾತನಾಡಬಾರದು ಎಂದು ಸುಮ್ಮನಿದ್ದೇನೆ. ನೆಟ್ಟಗಿರುವ ಮರ ಬೇಗ ಮುರಿದು ಬೀಳುತ್ತದೆ ಎಂದು ಮಹೇಶ್ ಕುಮಟಳ್ಳಿ ಮಾರ್ಮಿಕವಾಗಿ ಹೇಳಿದರು.