ನವದೆಹಲಿ, ಆಗಸ್ಟ್ 8 ಅಗಲಿದ ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ಸಚಿವಾಲಯ ಗರುವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. "ನಿಮ್ಮೊಂದಿಗಿನ ಒಡನಾಟಗಳು ನೆನಪುಗಳು ಮಾತ್ರ ಎಂದೆಂದಿಗೂ ಅಜರಾಮರ, ಶಾಶ್ವತವಾಗಿ ಉಳಿಯಲಿದೆ. ಮೇಲಾಗಿ ಸುಷ್ಮಾ ಶತಕೋಟಿ ಹೃದಯಗಳಲ್ಲಿ ನೆಲಸಿದ್ದಾರೆ" ಎಂದು ಸಂತಾಪ ಸಭೆಯಲ್ಲಿ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರದ ಮೊದಲ ಅವಧಿಯಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಕೆಲಸ ಮಾಡಿ ಜನಾನುರಾಗಿಯಾಗಿದ್ದರು. ವಿದೇಶಾಂಗ ಸಚಿವೆ ಜನರ ಪಾಲಿಗೆ ಅದರಲ್ಲೂ ಜನಸಾಮಾನ್ಯರ ಪಾಲಿಗೆ ಗಗನ ಕುಸಮ ಎಂಬುದನ್ನು ಅವರು ಸುಳ್ಳು ಮಾಡಿ ತೋರಿಸಿ, ಅನನ್ಯ ಕೀರ್ತಿಗೆ ಪಾತ್ರರಾಗಿದ್ದರು ಎಂದು ಅವರು ಗುಣಗಾನ ಮಾಡಿದರು.