ಬೆಂಗಳೂರು, ಮೇ 9,ಯಾವಾಗಲೂ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸಕ್ರಿಯವಾಗಿರುತ್ತಾರೆ. ಶನಿವಾರ ಬೆಳಗ್ಗೆ ಎರಡು ತಮ್ಮ ಮನ ಕಲಕಿದ ವಿದ್ಯಮಾನ ಜರುಗಿದೆ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ವಿದ್ಯಮಾನ ಒಂದು -
ಬೆಂಗಳೂರಿನ ಓರ್ವ ಯುವತಿ. ತನ್ನ ಎಂ.ಟೆಕ್ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು 2017 ರಲ್ಲಿ ಹೊರದೇಶಕ್ಕೆ ಹೋಗಿದ್ದಾರೆ. ಆ ಹೆಚ್ಚಿನ ಶಿಕ್ಷಣ ಮುಗಿಸಿದ ನಂತರ ಅಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿದೆ. (ಇದಕ್ಕಿಂತ ಅದೃಷ್ಟ ಬೇಕೇ ಎಂದು ತಾವು ಕೇಳಬಹುದು). ಆದರೆ., ಆಕೆಗೆ ಇದೀಗ ಬ್ಲಡ್ ಕ್ಯಾನ್ಸರ್ ಬಂದು ಅಪ್ಪಳಿಸಿದೆ. ಅಲ್ಲಿನ ಡಾಕ್ಟರ್ ಗಳು ಕೈ ಚೆಲ್ಲಿದ್ದಾರೆ. "ನಿಮ್ಮ ದೇಶಕ್ಕೇ ಹೋಗಿ. ಮನೆಯವರೊಂದಿಗೆ ಇರಿ" (ಅರ್ಥವಾಯಿತಲ್ಲವೇ, ಈ ಮಾತಿನ ಅರ್ಥ) ಎಂದಿದ್ದಾರೆ. ಈಗ ಆಕೆ ಅಲ್ಲಿಂದ ವಿಮಾನದಲ್ಲಿ ಇಲ್ಲಿಗೆ ಬರಬೇಕು. ಆಕೆಯ ಮನಸ್ಥಿತಿ ಹೇಗಿರಬಹುದು? ಆಕೆಗೆ ಅಲ್ಲಿ ಯಾರೂ ಇಲ್ಲ. ಆಕೆಯ ಇಲ್ಲಿನ ಬಂಧುಗಳು ನನಗೆ ತಿಳಿಸಿದಂತೆ ಇನ್ನು ಏಳು ದಿನಗಳೊಳಗೆ ಆಕೆ ವಿಮಾನ ಹತ್ತಿ ಬರಬೇಕು. ಇಲ್ಲದಿದ್ದರೆ ಆಕೆಯ ರೋಗ ನಿರೋಧಕ ಶಕ್ತಿ (immunity) ತೀರಾ ಕ್ಷೀಣವಾಗುತ್ತದೆ. (ನಾನು ಕೇಂದ್ರ ಸಚಿವ ಸದಾನಂದ ಗೌಡರ ಜೊತೆ ಮಾತನಾಡಿ, ವಿದೇಶಾಂಗ ಸಚಿವಾಲಯದ ಮೂಲಕ ಈಕೆಗೆ ನೆರವು ಯಾಚಿಸಿದ್ದೇನೆ. ಅವರು ಪೂರ್ಣ ವಿವರ ಕೇಳಿದ್ದಾರೆ. ಈಗ ಅದನ್ನೂ ಕಳಿಸಿದ್ದೇನೆ). ಒಂದು ತೊಂದರೆಯೆಂದರೆ, ಅಲ್ಲಿಂದ ಭಾರತಕ್ಕೆ ನೇರ ಫ್ಲೈಟ್ ಇಲ್ಲವಂತೆ.
ಇನ್ನೊಂದು ವಿದ್ಯಮಾನ ಎಂದರೆ, ನಮ್ಮ ಕ್ಷೇತ್ರದ ಜಡ್ಜಸ್ ಕಾಲೋನಿಯಲ್ಲಿ 91 ವರ್ಷದ ನಿವೃತ್ತ ನ್ಯಾಯಮೂರ್ತಿ ಶ್ಯಾಮಯ್ಯಂಗಾರ್ ನಿನ್ನೆ ರಾತ್ರಿ ತೀರಿಕೊಂಡರು. ಅವರಿಬ್ಬರು ಮಕ್ಕಳು ಅಮೆರಿಕಾದಲ್ಲಿದ್ದಾರೆ. ಸದ್ಯಕ್ಕೆ ಬರಲು ಸಾಧ್ಯವೇ ಇಲ್ಲ. ಹನ್ನೊಂದು ತಿಂಗಳ ಹಿಂದೆ ಶಾಮಯ್ಯಂಗಾರ್ ರವರ ಪತ್ನಿ ತೀರಿಕೊಂಡಾಗಲೂ ಆ ಮಕ್ಕಳು ಬರಲಾಗಿರಲಿಲ್ಲ. ಈಗ ತಂದೆಯ ಅಂತಿಮ ಕ್ರಿಯೆ ನಡೆಸಬೇಕಿದ್ದವರು Skype ಮೂಲಕ ಅಂತಿಮಕ್ರಿಯೆಯನ್ನು ನೋಡಬೇಕಷ್ಟೇ!.... ಎಂದು ಬರೆದುಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಕಷ್ಟು ಜನರು ಈ ಕುರಿತು ಕಮೆಂಟ್ ಮಾಡಿ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.