ನವದೆಹಲಿ, ಏ 16 ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೂ ಅವಕಾಶ ನಿಡಬೇಕೆಂದು ಮುಸ್ಲಿಂ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ಸಮ್ಮತಿಸಿದೆ.
ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ಪೀಠ, ಈ ಸಂಬಂಧ ಕೇಂದ್ರ ಸರ್ಕಾರ , ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಪಿಎಂಎಲ್ಬಿ) ಮತ್ತು ಸಂಬಂಧಪಟ್ಟ ಇತರ ಸಂಸ್ಥೆಗಳಿಗೂ ನೋಟಿಸ್ ಜಾರಿಗೊಳಿಸಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ನೀಡಿದ ತೀರ್ಪಿನ ದೃಷ್ಟಿಕೋನದಲ್ಲಿಯೇ ಮಹಿಳೆಯರ ಮಸೀದಿ ಪ್ರವೇಶದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ನ್ಯಾಯಪೀಠ ಭರವಸೆ ನೀಡಿದೆ.
ಮಸೀದಿಯೊಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡದಿರುವುದು ಮೂಲಭೂತ ಸಮಾನತೆಯ ಹಕ್ಕಿನ ಉಲ್ಲಂಘನೆಯಾದಂತೆ ಎಂದು ಮುಸ್ಲಿಂ ದಂಪತಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.