ಬೆಂಗಳೂರು, ಮೇ 12,ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಏಪ್ರಿಲ್ ನಿಂದ ಜೂನ್ 2020 ರವರೆಗೆ 3 ತಿಂಗಳ ಕಾಲ 4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ (ಎನ್.ಎಫ್.ಎಸ್.ಎ.) ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು 2351 ಕೋಟಿ ರೂಪಾಯಿಗಳ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರ್ಕಾರ 1735 ಕೋಟಿ ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯದ ಎತ್ತುವಳಿ ಮಾಡಿದೆ.ಲಾಕ್ ಡೌನ್ ಸಮಯದಲ್ಲಿ 302 ರೈಲು ರೇಕ್ ಲೋಡ್ ಅಂದರೆ 8.03 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಕರ್ನಾಟಕ ರಾಜ್ಯಕ್ಕೆ ನೀಡಿರುವುದಾಗಿ ಭಾರತ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್ ತಿಳಿಸಿದ್ದಾರೆ.
ಭಾರತೀಯ ಆಹಾರ ನಿಗದಮ ಕರ್ನಾಟಕ ವಿಭಾಗ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ (ಎನ್‌ಎಫ್‌ಎಸ್‌ಎ) ರಾಜ್ಯದ ಆಹಾರ ಧಾನ್ಯದ ಅಗತ್ಯತೆಗಳನ್ನು ಪೂರೈಸಲು ಇದುವರೆಗೆ ಪ್ರತಿನಿತ್ಯ 7.48 ಲಕ್ಷ ಚೀಲ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಸ್ವೀಕರಿಸಿ ರಾಜ್ಯದಲ್ಲಿ ವಿತರಿಸಲಾಗಿದೆ.
ಇದೇ ಅವಧಿಯಲ್ಲಿ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಾಜ್ಯ ಸರ್ಕಾರವು 2.54 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಹ ಎತ್ತುವಳಿ ಮಾಡಿದೆ. ಭಾರತ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ವಿತರಣೆಗಾಗಿ ಕರ್ನಾಟಕಕ್ಕೆ ಪೂರೈಸಿದ ಒಟ್ಟು ಆಹಾರ ಧಾನ್ಯಗಳ ಪ್ರಮಾಣ 8.51 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ತಲಾ 50 ಕೆ.ಜಿ.ಯ ಸುಮಾರು 1.70 ಕೋಟಿ ಚೀಲಗಳಾಗಿದೆ ಎಂದು ಡಿ.ವಿ. ಪ್ರಸಾದ್ ತಿಳಿಸಿದ್ದಾರೆ.
ಭಾರತ ಆಹಾರ ನಿಗಮವು ಆಹಾರ ಧಾನ್ಯಗಳ ಖರೀದಿ, ಸಾಗಾಟ ಮತ್ತು ದಾಸ್ತಾನಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಜೊತೆಗೆ ಪಿಎಂಜಿಕೆಎವೈ ಅಡಿಯಲ್ಲಿ ನೀಡಲಾದ ಎಲ್ಲಾ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ಎತ್ತುವಳಿ ಮಾಡುವಂತೆ ನೋಡಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಆಹಾರ ಧಾನ್ಯಗಳ ಸಮರ್ಪಕ ಲಭ್ಯತೆ ಇದೆ. ಯಾವುದೇ ಕಾರಣಕ್ಕೂ ಬಡ ಜನತೆಗೆ ಆಹಾರದ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಭಾರತ ಆಹಾರ ನಿಗಮದ ಸಿಎಂಡಿ ಡಿ.ವಿ.ಪ್ರಸಾದ್ ತಿಳಿಸಿದ್ದಾರೆ.