ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸುಡಾನ್ ಪ್ರಜೆ ಬಂಧನ

ಬೆಂಗಳೂರು, ಫೆ 12 :       ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.31 ವರ್ಷದ ಅಹಮದ್  ಅಲಿಯಾಸ್ ಹ್ಯಾಡಂ ಬಂಧಿತ ಆರೋಪಿ. ಈತ ಸುಡಾನ್‌ನ ತಾಯಿಫ್‌ ನಿವಾಸಿ ಎಂದು ತಿಳಿದುಬಂದಿದೆ.ಬಂಧಿತನಿಂದ ಪೊಲೀಸರು 13 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ನಗರದ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಕೆರೆ, 9ನೇ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವ  ಮಾದಕ ವಸ್ತು ಎಂ.ಡಿ.ಎಂ.ಎ. ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಕಲ್ಯಾಣನಗರ, ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದು, ತಾನು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದಿದ್ದೇನೆ. ಈ ಹಿಂದೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎನ್.ಟಿ. ಶ್ರೀನಿವಾಸ ರೆಡ್ಡಿ ರವರ ಮಾರ್ಗದರ್ಶನದಲ್ಲಿ, ಯಶವಂತಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುಹಮ್ಮದ್ ಮುಕಾರಮ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.