ಕಾರವಾರ 15: ಕರಾವಳಿ ಭಾಗದ ರೈತರು ಭತ್ತ, ಅಡಿಕೆ, ಬಾಳೆ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಈ ಭಾಗದಲ್ಲಿ ಕಾಫಿ ಬೆಳೆಯನ್ನೂ ಕೂಡಾ ಬೆಳೆಯಬಹುದು ಎಂಬುದನ್ನು ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ್‌ನ ಭಾರತಿ ಗಣೇಶ್ ರೈತ ದಂಪತಿಗಳು ತಮ್ಮ ಅಡಿಕೆ ತೋಟದಲ್ಲಿ ಸಾಧಿಸಿ ತೋರಿಸಿದ್ದಾರೆ.
ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ್‌ನ ಭಾರತಿ ಗಣೇಶ್ ಯಾಜಿ ದಂಪತಿಗಳು ಮೂಲತಃ ಕೃಷಿಕರಾಗಿದ್ದು , ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದು ಕೃಷಿಯಲ್ಲಿ ವಿಭಿನ್ನತೆ ತೋರಿ ತೋಟಗಾರಿಕಾ ಬೆಳೆಗಳಾದ ಕಾಳು ಮೆಣಸು, ಯಾಲಕ್ಕಿ, ವೀಳ್ಯದೆಲೆ ಬೆಳೆಯುತ್ತಿದ್ದು, ಕೃಷಿಯಲ್ಲಿ ಹೊಸತೇನನ್ನಾದರೂ ಮಾಡಬೇಕೆಂಬ ಹಂಬಲದಿಂದ ತೋಟಗಾರಿಕೆಯಲ್ಲಿ ಆಸಕ್ತಿ ಕಂಡು ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡುತ್ತಿದ್ದು, ಇದೀಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಫಿ ಗಿಡವನ್ನು ಬೆಳೆದು ಜಿಲ್ಲೆಯಲ್ಲಿಯೇ ಕಾಫಿ ಬೆಳೆದ ಪ್ರಥಮ ಕೃಷಿಕರಾಗಿದ್ದಾರೆ.
ಕಾಫಿ ಬೆಳೆಯ ಅನುಷ್ಠಾನ: ತೋಟಗಾರಿಕಾ ಇಲಾಖೆಯಡಿ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿನಡಿ 1527004/ ಋ /93393042894900245 ಕಾಮಗಾರಿ ಸಂಕೇತದಡಿ ಅಂದಾಜು 98 ಸಾವಿರ ಸಹಾಯಧನ ಪಡೆದು ತಮ್ಮ 2 ಎಕರೆ ಅಡಿಕೆ ತೋಟದಲ್ಲಿ 1000 ಕಾಫಿ ಗಿಡಗಳನ್ನು ನೆಟ್ಟು ಅವುಗಳ ಪೋಷಣೆಯಲ್ಲಿ ತೊಡಗಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಈ ದಂಪತಿಗಳು , ಈ ಗಿಡಗಳನ್ನು ತಮ್ಮ ಮಕ್ಕಳಂತೆ ಕಾಪಾಡಿದ್ದು, ಅವುಗಳಿಗೆ ನೀರುಣಿಸುವುದು, ಗೊಬ್ಬರ, ಬರಾವು ಇತ್ಯಾದಿ ಕೆಲಸಗಳನ್ನು ದಣಿವಿಲ್ಲದೆ ಕೈಗೊಳ್ಳುತ್ತಿದ್ದಾರೆ.
ಕಾಫಿ ಬೆಳೆ ನಿರ್ವಹಣೆ : ಕಾಫಿ ಗಿಡಕ್ಕೆ ತಂಪು ವಾತಾವರಣ ಅತ್ಯಾವಶ್ಯಕವಾಗಿದ್ದು, ಅಡಿಕೆ ಗಿಡಗಳ ಮಧ್ಯದಲ್ಲಿ ಕಾಫಿ ಗಿಡಗಳನ್ನು ಬೆಳೆಸಿದ್ದಾರೆ. ಈ ಸಸಿಗಳನ್ನು ಕೇರಳದಿಂದ ತರಿಸಿದ್ದು ಒಂದು ಗಿಡಕ್ಕೆ ತಲಾ 70 ರೂ ವೆಚ್ಚ ತಗುಲಿದೆ. ಈ ಫಲಾನುಭವಿಗಳು ತಮ್ಮ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ರಾಸಾಯನಿಕ ಗೊಬ್ಬರದ ಜೊತೆಗೆ ಸಗಣಿ ನೀರು, ಸ್ಲರಿ ಬಳಸಿ ಗಿಡಗಳಿಗೆ ಕೀಟಗಳ ಭಾಧೆ ತಾಕದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಆದಾಯ : ಕಾಫಿ ಬೆಳೆ ಇಲ್ಲಿನ ವಾತಾವರಣಕ್ಕೆ ಮೊದಲ ಬೆಳೆಯಾಗಿದ್ದರಿಂದ ಇದೀಗ ತಾನೇ ಹೂವು ಚಿಗುರಿದ್ದು ಮುಂದಿನ ದಿನಗಳಲ್ಲಿ ಆದಾಯ ಹಾಗೂ ಬೆಳೆಯ ಕುರಿತಾದ ಪ್ರಾಯೋಗಿಕ ಫಲದ ನೀರೀಕ್ಷೆಗೆ ಕುತೂಹಲದಿಂದ ಕಾಯಬೇಕಿದೆ. ಕಾಫಿ ಬೆಳೆ ಬೆಳೆದಿರುವ ಕುರಿತಂತೆ ಮಾತನಾಡಿದ ಫಲಾನುಭವಿ ಭಾರತಿ ಯಾಜಿ ದಂಪತಿಗಳು, ನಾವು ಮೊದಲ ಬಾರಿಗೆ ಕಾಫಿ ಬೆಳೆದಿದ್ದೇವೆ. ಇದನ್ನು ಬೆಳೆಯುವ ಕುರಿತು ತೋಟಗಾರಿಕಾ ಇಲಾಖೆಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪರಿಣಿತರ ಕೆಲವು ಸಲಹೆ ಮೇರೆಗೆ ಈ ಗಿಡಗಳನ್ನೂ ಪೋಷಿಸುತ್ತಿದ್ದು, ಕಾಫಿ ಬೀಜಗಳ ಇಳುವರಿಯ ಬಗ್ಗೆ ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದು, ಜಿಲ್ಲೆಯ ಇತರೇ ರೈತರು ಸಹ ತಮ್ಮ ತೋಟಗಳಲ್ಲಿ ಇದನ್ನು ಬೆಳೆಯಬಹುದಾಗಿದೆ, ಮುಂದಿನ ದಿನಗಳಲ್ಲಿ ಕಾಫಿಯನ್ನೂ ಕೂಡಾ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಮಾಡಿಕೊಳ್ಳಬಹುದು ಎಂದರು.