ಬೆಂಗಳೂರು, ಮೇ 12,2020-21 ನೇ ಸಾಲಿನ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಉಪ ಯೋಜನೆಯಡಿ ಎಲ್ಲಾ ಇಲಾಖೆಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮೇ 20ರೊಳಗೆ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದ್ದಾರೆ.ವಿಕಾಸಸೌಧದಲ್ಲಿಂದು 2020-21 ನೇ ಸಾಲಿನ ಎಸ್‍ಸಿಪಿ ಮತ್ತು ಎಸ್‍ಟಿಪಿ ಕ್ರಿಯಾ ಯೋಜನೆಯ ಕುರಿತು ನೋಡೆಲ್ ಏಜೆನ್ಸಿ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ನಡೆಯಲಿರುವ ಪರಿಶಿಷ್ಟ ಜಾತಿ, ಪಂಗಡ , ಗಿರಿಜನ ಉಪಯೋಜನೆ ಕುರಿತ ರಾಜ್ಯ ಪರಿಷತ್ ಸಭೆಯಲ್ಲಿ ಈ ಕ್ರಿಯಾಯೋಜನೆ ಯನ್ನು ಮಂಡಿಸಿ, ಅನುಮೋದನೆ ಪಡೆಯಬೇಕಿದೆ. ಶಿಕ್ಷಣ, ಸ್ವಯಂ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪರಿಶಿಷ್ಟರಿಗೆ ಆಸ್ತಿಯಾಗಿ ರೂಪಾಂತರವಾಗುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯುಷ್ಮಾನ್ ಭಾರತ ಯೋಜನೆಯಡಿ 200 ಕೋಟಿ ರೂ ಖರ್ಚು ಮಾಡುತ್ತಿದೆ. ಆದರೆ ಪರಿಶಿಷ್ಟ ಜಾತಿ ಮತ್ರು ವರ್ಗದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವುದನ್ನು ಪರಿಶೀಲಿಸಿ ತಲುಪುವಂತೆ ಮಾಡಬೇಕು. ಈ ಯೋಜನೆಯಡಿ ನಿರ್ಮಿಸಲಿರುವ ಆಸ್ಪತ್ರೆ ಕಟ್ಟಡಗಳು ಪರಿಶಿಷ್ಟ ಜಾತಿ ಮತ್ತು ವರ್ಗ ಸಮುದಾಯವು ಹೆಚ್ವಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ನಿರ್ಮಿಸಬೇಕು ಎಂದು ಕಾರಜೋಳ ಹೇಳಿದರು.
ಶುಚಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು. ಈ ಅನುದಾನವನ್ನು ಅದೇ ಸಮುದಾಯದ ಏಳಿಗೆಗೆ ಉಪಯೋಗಿಸಬೇಕು. ಕಳೆದ ವರ್ಷ ಅಪೂರ್ಣಗೊಂಡ ಮನೆಗಳನ್ನು ಪೂರ್ಣಗೊಳಿಸಬೇಕು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ಹೋದವರು ಹೆಚ್ಚಾಗಿ ಅವರ ಗ್ರಾಮಗಳಲ್ಲಿದ್ದಾರೆ ಅವರೆಲ್ಲರಿಗೂ ಉದ್ಯೋಗ ಖಾತರಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಉದ್ಯೋಗ ಕಾರ್ಡುಗಳನ್ನು ನೀಡಬೇಕು. ಕೃಷಿ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ರೈತರ ಕುರಿತು ಮಾಹಿತಿ ಸಂಗ್ರಹಿಸಿ, ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು. ಗಂಗಾ ಕಲ್ಯಾಣ ಯೋಜನೆಯು ಅತ್ತುತ್ತಮವಾದ ಯೋಜನೆಯಾಗಿದ್ದು, ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಕ್ರಮಕೈಗೊಳ್ಳಬೇಕು. ಈ ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ವಸತಿ ಶಾಲೆಗಳ ಆವರಣದಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಬೇಕು. ಅಂತರ ಜಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸೂಚಿಸಿದರು.
ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಸಸಿ ನೆಟ್ಟು ವನಸಿರಿಗೂ ಆದ್ಯತೆ ನೀಡಬೇಕು. ಎಲ್ಲಾ ಇಲಾಖೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸಬೇಕು. ಯೋಜನೆವಾರು ಫಲಾನುಭವಿಗಳ ವಿವರವನ್ನು ಆಪ್ ನಲ್ಲಿ ಅಪ್ ಲೋಡ್ ಮಾಡಬೇಕು. ಬಡತನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿ ಸಮುದಾಯದ ಕಲ್ಯಾಣಕ್ಕಾಗಿ ಸ್ವಯಂ ಪ್ರೇರಣೆಯಿಂದ ಅನುಷ್ಟಾನಗೊಳಿಸಿ, ಸಮುದಾಯದ ಏಳಿಗಾಗಿ ಶ್ರಮಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರರ ಇ. ವೆಂಕಟಯ್ಯ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.