ಕಣಿವೆಯಲ್ಲಿ ಶಾಲಾ, ಕಾಲೇಜು ತೆರೆದರೂ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು.!

ಶ್ರೀನಗರ, ಅ, 10:   ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು  ಇಂದಿನಿಂದ  ತೆಗೆದುಹಾಕಲಾಗಿದೆ,  ಈ ನಡುವೆ  ಹೆಚ್ಚಿನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದ ಕಾರಣ ಕಣಿವೆಯಲ್ಲಿ ಕಾಲೇಜು ಬಾಗಿಲು ತೆರೆಯುವ ಸ್ಥಳೀಯ ಆಡಳಿತದ ಪ್ರಯತ್ನ ಸಹ ವಿಫಲವಾಗಿದೆ.  ಆಗಸ್ಟ್ 2 ರಂದು ರಾಜ್ಯ ಆಡಳಿತವು ಪ್ರವಾಸಿಗರಿಗೆ, ವಿಶೇಷವಾಗಿ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಿಕರು ಕಾಶ್ಮೀರ ಕಣಿವೆಯಿಂದ ಬೇಗ ನಿರ್ಗಮಿಸುವಂತೆ  ಸಲಹೆ ಮಾಡಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370 ವಿಧಿ  ರದ್ದು ಪಡಿಸಿದ ನಂತರ ಕಾಶ್ಮೀರದಾದ್ಯಂತ ಚಳುವಳಿ ಮತ್ತು ಸಂವಹನದ ಮೇಲೆ  ಸರ್ಕಾರವು ನಿರ್ಬಂಧ ಹಾಕಿದ್ದು ನೂರಾರು ರಾಜಕೀಯ ನಾಯಕರನ್ನು ಮುನ್ನೆಚ್ಚರಿಕೆಯ  ಕ್ರಮವಾಗಿ ಬಂಧಿಸಿದೆ. ಸೋಮವಾರ, ರಾಜ್ಯದ ಭದ್ರತಾ ಸ್ಥಿತಿ  ಪರಿಶೀಲಿಸುವಾಗ, ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಪ್ರವಾಸಿಗರು ಸರ್ಕಾರದ ಸಲಹೆ, ಸೂಚನೆ ಪಾಲಿಸಬೇಕೆಂದು ನಿರ್ದೇಶನ ನೀಡಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು, ಮೆಹಬೂಬಾ ಮುಫ್ತಿ, ಉಮರ್ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ ಸೇರಿದಂತೆ 1,000 ಕ್ಕೂ ಹೆಚ್ಚು ಜನರನ್ನು ಕಳೆದ ಎರಡು ತಿಂಗಳಿನಿಂದಲೂ ಗೃಹ  ಬಂಧನಲ್ಲಿ ಇಡಲಾಗಿದೆ. ಕಳೆದ ಶನಿವಾರ, ರಾಜ್ಯ  ಎನ್ ಸಿ  ನಿಯೋಗಕ್ಕೆ ಎರಡು ತಿಂಗಳ ನಂತರ ತಮ್ಮ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ರಾಜ್ಯಪಾಲರು ಅನುಮತಿ ನೀಡಿದ್ದರು .ಈ ನಡುವೆ ಬುಧವಾರ, ಹೆಚ್ಚಿನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದ ಕಾರಣ ಕಾಶ್ಮೀರದ ಕಾಲೇಜುಗಳನ್ನು ಮತ್ತೆ ತೆರೆಯುವ ಸ್ಥಳೀಯ ಆಡಳಿತದ ಪ್ರಯತ್ನ ವಿಫಲವಾಗಿದೆ.  ವಿಭಾಗೀಯ ಆಯುಕ್ತ (ಕಾಶ್ಮೀರ) ಬಸೀರ್ ಖಾನ್ ಕಳೆದ ವಾರ ಶಾಲೆಗಳು ಇದೇ  3 ರಂದು ಮತ್ತು ಕಾಲೇಜುಗಳು ಇದೆ  9 ರಂದು  ಮತ್ತೆ ತೆರೆಯುವುದಾಗಿ ಘೋಷಿಸಿದ್ದರು. ಕಾಲೇಜು  ಸಿಬ್ಬಂದಿ ಕೆಲಸಕ್ಕಾಗಿ ಹಾಜರಾಗಿದ್ದರೂ  ವಿದ್ಯಾರ್ಥಿಗಳು ಮಾತ್ರ ಶಾಲಾ, ಕಾಲೇಜುಗಳಿಂದ  ದೂರವೇ  ಉಳಿದಿದ್ದಾರೆ.