ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು

ಲೋಕದರ್ಶನ ವರದಿ

ಬೆಳಗಾವಿ 05: ಪ್ರತಿಯೊಬ್ಬ ವಿದ್ಯಾರ್ಥಿ  ಕಠಿಣ ಅಭ್ಯಾಸದೊಂದಿಗೆ ವಿರಾಮಕ್ಕೂ ಅರ್ಹನಾಗಿದ್ದಾನೆ. ಕಾರಣ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುವ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಚಿತ್ರನಟ ವಿಜಯ ರಾಘವೇಂದ್ರ ಹೇಳಿದರು.

ಬೆಳಗಾವಿಯ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮಾ. 20 ಮತ್ತು 21ರಂದು ನಡೆಯಲಿರುವ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್ ಓಡಿಸ್ಸಿ-20ಯ ಬ್ಯಾನರ್ ಅನಾವರಣಗೊಳಿಸಿ ಮಾತನಾಡಿದ ಅವರು, ಉತ್ಸವಗಳು  ಜನರೊಂದಿಗೆ ಬೆರೆಯಲು ನಿಮ್ಮನ್ನು ಪ್ರೇರೇಪಿಸುತ್ತವೆ ಎಂದರು. ಇಡೀ ದಿನ ನಿಮ್ಮ ಕೋಣೆಯಲ್ಲಿಯೇ ಸಿಲುಕಿಕೊಳ್ಳಬಾರದು. ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಬೇಕು. ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಅವು ವೇದಿಕೆಯಾಗುತ್ತವೆ ಎಂದರು. ಹೀಗೆ ಮಾಡುವುದರಿಂದ ಸಮಯ ನಿರ್ವಹಣೆ ಕೌಶಲ್ಯ ಅನುಭವಕ್ಕೆ ಬರುತ್ತದೆ. ವ್ಯವಸ್ಥಾಪಕ ತಿಳಿವಳಿಕೆ ಮೂಡುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಕೆ.ಜಿ. ವಿಶ್ವನಾಥ ಮಾತನಾಡಿ, ಎರಡು ದಿನಗಳ ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೆಚ್ಚಿಸುವುದು. ತಾಂತ್ರಿಕ, ತಾಂತ್ರಿಕೇತರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮಿಶ್ರಣವಾಗಿರುವ ಉತ್ಸವ ವಿದ್ಯಾರ್ಥಿಗಳಲ್ಲಿ ನವ ಚೈತನ್ಯ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.