ಸಮ್ಮೇಳನದ ಯಶಸ್ಸಿಗೆ ಶ್ರಮಿಸಿ: ಅಡಿವೇಶ ಇಟಗಿ

ಸಮ್ಮೇಳನದ ಯಶಸ್ಸಿಗೆ ಶ್ರಮಿಸಿ: ಅಡಿವೇಶ ಇಟಗಿ  Strive for the success of the conference: Adivesha Itagi

ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ  

ಬೆಳಗಾವಿ 26: ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸುವುದರ ಜೊತೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗಾಗಿಯೇ ನಡೆಯುತ್ತಿರುವ ರಾಜ್ಯಮಟ್ಟದ ಈ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಸ್ಥಳ ಹಾಗೂ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಆದರೂ ಸಹ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕೆಂದು ಸಲಹೆ ನೀಡಿದರು. ಅಗತ್ಯ ಬಿದ್ದರೆ ಸಂಬಂಧಿಸಿದ ಇಲಾಖೆಗಳ ಸಹಕಾರ ಪಡೆದುಕೊಳ್ಳಬೇಕು. ಅಲ್ಲದೇ ಸಮ್ಮೇಳನದ ಹಿನ್ನೆಲೆಯಲ್ಲಿ ಸಮಿತಿಗಳನ್ನು ಉಪಸಮಿತಿಗಳನ್ನು ರಚಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು. ಎಲ್ಲ ಸಿದ್ಧತೆಗಳ ಮೇಲ್ವಿಚಾರಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ವಿಭಾಗ ಮಟ್ಟದ ಬಾಲ ಬಾಂಧವ್ಯ ಕಾರ್ಯಕ್ರಮ, ತಾಲೂಕು ಮಟ್ಟದ ಬಾಲ ವಿಕಾಸ ನಡಿಗೆ ಪಾಲಕರ ಕಡೆಗೆ ಕಾರ್ಯಕ್ರಮ ಮತ್ತು ಸಮ್ಮೇಳನದ ಹಿನ್ನೆಲೆಯಲ್ಲಿ ಹೊರತರಲಾಗುವ ಪುಸ್ತಕಕ್ಕಾಗಿ ಮಕ್ಕಳ ಸಾಹಿತ್ಯ ಕುರಿತಾದ ಲೇಖನಗಳನ್ನು ಸಾಹಿತಿಗಳ ಕಡೆಯಿಂದ ಆಹ್ವಾನಿಸಿಕೊಳ್ಳಬೇಕೆಂದು ಅಧ್ಯಕ್ಷರಾದ ಅಡಿವೇಶ ಇಟಗಿ ಅವರು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ ಎನ್ ಚೇತನ್ ಕುಮಾರ್, ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕಾಂಚನಾ ಅಮಟೆ, ಬೆಳಗಾವಿ ಮತ್ತು ಚಿಕ್ಕೋಡಿಯ ಶಿಕ್ಷಣ ಇಲಾಖೆ ಉಪನಿರ್ದೇಶಕರು, ತಾಲೂಕು. ಸಿಡಿಪಿಒ ಗಳು ಹಾಗೂ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಚಿವೆ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ಸಮ್ಮೇಳನ....ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಲಿದ್ದು, ಸಮ್ಮೇಳನದ ದಿನಾಂಕ ಹಾಗೂ ಸ್ಥಳದ ಕುರಿತು ಚರ್ಚೆ ನಡೆದಿದೆ. ಒಟ್ಟಿನಲ್ಲಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಹಾಗೂ ಅವೀಸ್ಮರಣೀಯವಾಗಿ ಆಯೋಜನೆ ಮಾಡಲಾಗುವುದು.-ಅಡಿವೇಶ ಇಟಗಿ, ಅಧ್ಯಕ್ಷರು ಬಾಲ ವಿಕಾಸ ಅಕಾಡೆಮಿ, ಧಾರವಾಡ