ರಸಗೊಬ್ಬರ ವಿತರಣೆ, ಮಣ್ಣು ಆರೋಗ್ಯ, ನೀರಾವರಿ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕುರಿತು ಅಧಿಕಾರಿಗಳಿಂದ ಮಾರ್ಗದರ್ಶನ

ರಸಗೊಬ್ಬರ ವಿತರಣೆ, ಮಣ್ಣು ಆರೋಗ್ಯ, ನೀರಾವರಿ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕುರಿತು ಅಧಿಕಾರಿಗಳಿಂದ ಮಾರ್ಗದರ್ಶನ Guidance from officials on fertilizer distribution, soil health, irrigation management, and technic

ಲೋಕದರ್ಶನ ವರದಿ

  ಗದಗ 02:  ಜಿಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಐಸಿಎಆರ್‌-ಕೆವಿಕೆ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗದಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು.  

ಕಾರ್ಯಕ್ರಮವನ್ನು ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರು ಹಾಗೂ ಜಂಟಿ ಕೃಷಿ ನಿರ್ದೇಶಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಶ್ರೀ ಎಂ.ಎಸ್‌. ಕುಲಕರ್ಣಿ ಅವರು ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ನೀಡಿದರು.  

ಕಾರ್ಯಾಗಾರದಲ್ಲಿ ರೈತರಿಗೆ ರಸಗೊಬ್ಬರಗಳ ಸರಿಯಾದ ಬಳಕೆ, ಸಂಕೀರ್ಣ ಗೊಬ್ಬರಗಳ ಉಪಯೋಗ, ಪರ್ಯಾಯ ಬೆಳೆಗಳ ಆಯ್ಕೆ ಹಾಗೂ ಭೂ-ಫಲವತ್ತತ್ತೆ ಹೆಚ್ಚಿಸುವ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಯೂರಿಯಾ ಬಳಕೆಯ ಪರ್ಯಾಯ ವಿಧಾನಗಳು ಮತ್ತು ಸಮತೋಲನ ಗೊಬ್ಬರ ಬಳಕೆಯ ಅಗತ್ಯತೆಯ ಕುರಿತು ವಿಶೇಷವಾಗಿ ವಿವರಿಸಲಾಯಿತು.  

ಜಂಟಿ ಕೃಷಿ ನಿರ್ದೇಶಕರು ಶ್ರೀಮತಿ ಚೇತನ ಪಾಟೀಲ್ ಅವರು ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಬೆಳೆ ವಿಮೆ ಹಾಗೂ ವಿವಿಧ ಕೃಷಿ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.  

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವಿ. ಮಂಕಣಿ ಅವರು ಸಾವಯವ ಕೃಷಿಯ ಮಹತ್ವ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಕೃಷಿ ವಿಧಾನಗಳ ಅಗತ್ಯತೆಯನ್ನು ಒತ್ತಿಹೇಳಿದರು. ನಿರಂತರ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಬಗ್ಗೆ ಅವರು ಎಚ್ಚರಿಸಿದರು.  

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳು ಹಾಗೂ ಇತರ ತಜ್ಞರು ಮಳೆ ಪ್ರಮಾಣದ ಆಧಾರದ ಮೇಲೆ ಬೆಳೆ ಆಯ್ಕೆ, ನೀರಾವರಿ ನಿರ್ವಹಣೆ, ನಂಬರ್ ಮ್ಯಾಪಿಂಗ್ ಮತ್ತು ಹಿಸ್ಸಾ ಮ್ಯಾಪಿಂಗ್ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ರೈತರಿಗೆ ಕ್ಷೇತ್ರ ಮಟ್ಟದಲ್ಲಿ ಅನುಸರಿಸಬಹುದಾದ ವಿಧಾನಗಳ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು.  

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. ಜೊತೆಗೆ ರೈತ ಉತ್ಪಾದಕರ ಸಂಘಗಳ ಬಲವರ್ಧನೆ ಕುರಿತು ಚರ್ಚೆ ನಡೆಯಿತು.  

ಒಟ್ಟು ಸುಮಾರು 125 ರೈತರು ಹಾಗೂ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರೈತರಿಗೆ ಅಗತ್ಯವಾದ ಕೃಷಿ ಉಪಕರಣಗಳು ಹಾಗೂ ಇನ್ಪುಟ್ಗಳನ್ನು ವಿತರಿಸಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ವಹಿಸಿದ್ದರು ಮತ್ತು ಅವರು ರೈತರಿಗೆ ವೈಜ್ಞಾನಿಕ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳ ಸಂಯೋಜನೆಯ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.