ರಾಯಬಾಗ 24: ದೇಶದಲ್ಲಿ ಹೆಚ್ವುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದು, ಹೆಚ್ಚು ಮಕ್ಕಳನ್ನು ಹೆರುವ ಕುಟುಂಬಗಳಿಗೆ ಸರಕಾರದ ಸೌಲಭ್ಯಗಳನ್ನು ಕಡಿತಗೊಳಿಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ಮತ್ತು ಆಶಾ ಕಾರ್ಯಕತರ್ೆಯರು ಗ್ರಾಮೀಣ ಭಾಗದ ಜನರಿಗೆ ಕುಟುಂಬ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 35 ಕೋಟಿ ಇದ್ದ ದೇಶದ ಜನಸಂಖ್ಯೆ ಇಂದು 100 ಕೋಟಿಯನ್ನು ಮೀರಿದೆ. ಇದೇ ರೀತಿ ಜನಸಂಖ್ಯೆ ಹೆಚ್ಚುತ್ತಿದ್ದರೆ ಮುಂಬರುವ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶಾಲಾ ಮಟ್ಟದಿಂದ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಿಳುವಳಿಕೆ ನೀಡಿ, ಹೆಣ್ಣು, ಗಂಡು ಎಂಬ ಭೇದವನ್ನು ಹೋಗಲಾಡಿಸಿ ಇಬ್ಬರು ಸಮವೆಂಬ ಭಾವನೆ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು. ಶಿಕ್ಷಣದ ಬಗ್ಗೆ ಅರಿವು ಕಡಿಮೆ ಇದ್ದವರ ಕುಟುಂಬಗಳಲ್ಲಿ ಮಕ್ಕಳು ಸಂಖ್ಯೆ ಹೆಚ್ಚಾಗಿರುತ್ತದೆ. ಕಾರಣ ಎಲ್ಲರಿಗೂ ಉನ್ನತ ಶಿಕ್ಷಣ ದೊರಕುವಂತಾಗಬೇಕೆಂದು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ವಿಜಯಕುಮಾರ ಹತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಮ್.ಎಸ್.ಕೊಪ್ಪದ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಬಿಇಒ ಸಿ.ಆರ್.ಓಣಿ, ಡಾ.ಎಸ್.ಎಸ್.ಬಾನೆ, ಸದಾಶಿವ ಘೋರ್ಪಡೆ, ಗೋಪಾಲ ಕೊಚೇರಿ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕತರ್ೆಯರು ಇದ್ದರು.
ಬೆಳಗ್ಗೆ ಹಳೆ ಪೊಲೀಸ್ ಠಾಣೆಯಿಂದ ಪಟ್ಟಣದ ವಿವಿಧ ಗಲ್ಲಿಗಳಲ್ಲಿ 'ಸಾರ್ಥಕತೆಯ ನಾಳೆಯ ಜೀವನಕ್ಕಾಗಿ ಕುಟುಂಬ ಯೋಜನೆಗಳ ಬಳಕೆ' ಘೋಷಣೆಯೊಂದಿಗೆ ಜಾಥಾ ಕಾರ್ಯಕ್ರಮ ನಡೆಯಿತು.
ಫೋಟೊ ಶಿಷರ್ಿಕೆ: ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಿ.ಎಮ್.ಐಹೊಳೆ ಮತ್ತು ಪಿ.ರಾಜೀವ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.