ಬೆಂಗಳೂರು, ಮೇ 28,ಕೊರೋನಾ ವೈರಸ್ ಸೋಂಕು ನಿಯಂತ್ರಣ ಕ್ರಮಗಳನ್ನು ಮೀರಿ ಒಳನುಸುಳುತ್ತಿರುವವರನ್ನು ತಡೆಯಲು ಜಿಲ್ಲಾ, ತಾಲ್ಲೂಕು ಗಡಿ ಮತ್ತು ಒಳದಾರಿಗಳಲ್ಲೂ ಸೂಕ್ತ ಬಿಗಿ ಪೊಲೀಸ್ ಪಹರೆ ಏರ್ಪಡಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತಾಡಿದ ಅವರು, ಕಳ್ಳದಾರಿಗಳಲ್ಲಿ ಬೇರೆ ರಾಜ್ಯದ ಜನ ಅಕ್ರಮವಾಗಿ ಪ್ರವೇಶಿಸುತ್ತಿದ್ದು, ಇವರನ್ನು ಪತ್ತೆಹಚ್ಚಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕುಗಡಿಗಳ ಜತೆಗೆ ಒಳದಾರಿಗಳಿಗೂ ಪೊಲೀಸರನ್ನು ನಿಯೋಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಕೊರೋನಾ ಸೋಂಕು ನಿಯಂತ್ರಣ ಕಾರ್ಯದ ಮುಂಚೂಣಿಯಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಮಾಸ್ಕ್ , ಶೀಲ್ಡ್ ಹಾಗೂ ಸ್ಯಾನಟೈಸರ್ ಒದಗಿಸುವಂತೆ ಸೂಚಿಸಲಾಗಿದೆ. ಕ್ವಾರಂಟೈನ್ ನಿಗಾದಲ್ಲಿರುವವರು, ಹೆದ್ದಾರಿಗಳಲ್ಲಿ ನಿಯೋಜನೆಗೊಂಡಿರುವ ಎಲ್ಲ ಪೊಲೀಸರಿಗೆ ಕಡ್ಡಾಯವಾಗಿ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸುವಂತೆಯೂ ಆದೇಶಿಸಲಾಗಿದೆ ಎಂದು ಹೇಳಿದರು.