ಶಿಗ್ಗಾವಿ 13 : ಪಟ್ಟಣದ ವಚನ ನಿಧಿ ವನಿತಾ ಸಂಘದಿಂದ ಸತತ ಏಳು ವರ್ಷಗಳಿಂದ ಮಹಿಳಾ ಸಾಧಕಿಯರಿಗೆ ಕೊಡ ಮಾಡುವ ಸ್ತ್ರೀ ನಿಧಿ ಪ್ರಶಸ್ತಿಯನ್ನು 2025 ನೇ ಸಾಲಿಗೆ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಸಾಧಕಿ ಮಾತೋಶ್ರೀ ಭೀಮವ್ವ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ ಅವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿಸಿ ವಚನ ನಿಧಿ ವನಿತಾ ಸಂಘದ ಅದ್ಯಕ್ಷಣಿ ಡಾ.ಲತಾ ನಿಡಗುಂದಿ ಮಾತನಾಡಿ ಸಾಕ್ಷರಳಲ್ಲದಿದ್ದರೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಇವರು 103 ವರ್ಷದ ಸಂತೃಪ್ತ ಹಿರೀಜೀವ. ಜಾನಪದ ಕಲೆಯಾದ ತೊಗಲು ಗೊಂಬೆಯಾಟವನ್ನು ತವರಿನಿಂದ ಬಳುವಳಿಯಾಗಿ ಪಡೆದು, ಪತಿಯ ಮನೆಯಲ್ಲಿ ನೆಲೆಯೂರಿಸಿ ತನ್ನ ಪೀಳಿಗೆಗೆ ಧಾರೆ ಎರೆದಿದ್ದಾರೆ. ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಗಿರಿಮೊಮ್ಮಕ್ಕಳು .. ಹೀಗೆ ನಾಲ್ಕು ತಲೆಮಾರುಗಳ ಒಡತಿ ಈ ಭೀಮವ್ವ. ಇವರಿಗೆ ಪ್ರಶಸ್ತಿ ನೀಡಿದ ವಚನ ನಿಧಿ ವನಿತಾ ಸಂಘ ತನ್ನ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಭೀಮವ್ವ ಅವರ ಮಗನಾದ ಕೇಶವಪ್ಪ ತಾಯಿಯ ಜೊತೆ ರಾಮಾಯಣ ಮತ್ತು ಮಹಾಭಾರತದ ಪದ್ಯಗಳನ್ನು ಲೀಲಾಜಾಲವಾಗಿ ಹಾಡಿ ರಂಜಿಸಿದರು. ಈ ಸಮಾರಂಭದಲ್ಲಿ ಭೀಮವ್ವ ಅವರ ಕುಟುಂಬಸ್ಥರು, ವಚನ ನಿಧಿ ವನಿತಾ ಸಂಘದ ಸದಸ್ಯರಾದ ಪ್ರತಿಭಾ ಗಾಂಜಿ, ವಿಜಯಲಕ್ಷ್ಮಿ ಹರವಿ, ಕವಿತಾ ಎಲ್ ಡಿ, ಶಕುಂತಲಾ ಕೋಣನವರ ಸೇರಿದಂತೆ ಬೆಟಗೇರಿಯ ಮುತ್ತಣ್ಣ ಮತ್ತು ರಾಜೇಶ್ವರಿ ದಂಪತಿಗಳು ಉಪಸ್ಥಿತರಿದ್ದರು.