ಕಲಬುರಗಿ, ಆಗಸ್ಟ್ 8 ಮಹಾರಾಷ್ಟ್ರದ ಜಲಾಶಯಗಳಿಂದ ಭಾರೀ ಪ್ರಮಾಣದ ಬೃಹತ್ ನೀರು ಹರಿದು ಬರುತ್ತಿರುವ ಕಾರಣ ಕೃಷ್ಣ ನದಿ ಮತ್ತು ಅದರ ಉಪ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮವಾಗಿ ವಿಜಯಪುರದ ಗಾಣಗಾಪುರ - ಇಟಗಿಯ, ಸಿಂಧಗಿ ತಾಲ್ಲೂಕುಗಳ ಅನೇಕ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಜೊತೆಗೆ ಹಲವು ದೇವಾಲಯಗಳು ನೀರಿನಲ್ಲಿ ಮುಳಗಡೆಯಾಗಿವೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರದ ಉಜ್ಜನಿ ಮತ್ತು ಇತರೆ ಅಣೆಕಟ್ಟಿನಿಂದ 4.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಅಫ್ಜಲ್ಪುರ ತಾಲ್ಲೂಕಿನ ಭೀಮಾ ಜಲಾಶಯ ಭರ್ತಿಯಾಗಿದ್ದು ಪರಿಣಾಮ, ಸೋನ್ನಾ ಬ್ಯಾರೇಜ್ ನಿಂದ 2.64 ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಭೀಮಾ ತೀರದ ಮನ್ನೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ನೀರಿನಲ್ಲಿ ಮುಳುಗಿದೆ. ದೇವಳ ಗಾಣಗಾಪುರ ತಿರುವಿನ ಸೇತುವೆ ಸಹ ನೀರಿನಲ್ಲಿ ಮುಳುಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಇಲ್ಲಿಯೆ ಗಟ್ಟರಾಗ ಬ್ಯಾರೇಜ್ ಬಳಿಯೇ ಬಿಡಾರ ಹೂಡಿದ್ದು ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಕಲಬುರಗಿ ಸಂಸದ ಉಮೇಶ್ ಜಾಧವ್ ಮತ್ತು ಅಫ್ಜಲ್ಪುರ ಶಾಸಕ ಎಂ ವೈ ಪಾಟೀಲ್ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಭೀಮಾ ನದಿಯ ಸಮೀಪದ ಅನೇಕ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಒಟ್ಟು 2.64 ಲಕ್ಷ ಕ್ಯೂಸೆಕ್ ನೀರಿ ಸೋನ್ನಾದಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ ಭೀಮಾ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನದಿಯ ಬಳಿ ಜನರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಇದೇ ಪ್ರಮಾಣದ ನೀರು ಹರಿದು ಬಂದರೆ ಮತ್ತೆ ಆರೇಳು ಗ್ರಾಮಗಳು ಭಾಗಶಃ ಮುಳುಗಡೆಯಾಗುವ ಭೀತಿ ಎದುರಿಸಲಿದ್ದು, ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.