ಕೇಂದ್ರದ ರೈತ ವಿರೋಧಿ ಕ್ರಮಗಳ ವಿರುದ್ಧ ಜೂ 10 ರಂದು ರಾಜ್ಯಾದ್ಯಂತ ಪ್ರತಿಭಟನೆ: ಪ್ರಾಂತ ರೈತ ಸಂಘ ಎಚ್ಚರಿಕೆ

ಬೆಂಗಳೂರು, ಜು 8,ರೈತರು ಹಾಗೂ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳ ಮರ್ಜಿಗೆ ದೂಡುವ ಕೇಂದ್ರದ ರೈತ ವಿರೋಧಿ  ಕ್ರಮಗಳ ವಿರುದ್ಧ ಜೂನ್ ೧೦ ರಂದು ರಾಜ್ಯಾದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಎಚ್ಚರಿಕೆ ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ರೈತ ವಿರೋಧಿ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಸುಗ್ರಿವಾಜ್ಞೆ ಹೊರಡಿಸುವ ತೀರ್ಮಾನವನ್ನು ವಿರೋಧಿಸಿ ತಿದ್ದುಪಡಿ ಕಾಯ್ದೆಗಳ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸುವಂತೆ ಸಂಘದ ಅಧ್ಯಕ್ಷ ಜೆ.ಸಿ. ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು. ಬಸವರಾಜು ಕರೆ ಕೊಟ್ಟಿದ್ದಾರೆ.  ಇದೇ 10 ರಂದು ದೇಶದಾದ್ಯಂತ ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದಲ್ಲಿ ಭಾರಿ ಪ್ರತಿಭಟನೆಗಳು ನಡೆಯಲಿದ್ದು, ಕೇಂದ್ರ ಸರಕಾರದ ಈ ಕ್ರಮಗಳು ರೈತರು ಹಾಗೂ ಗ್ರಾಮೀಣ ಜನತೆ, ಒಟ್ಟಾರೆ ವ್ಯವಸಾಯ, ದೇಶದ ಎಲ್ಲಾ ಗ್ರಾಹಕ ಸಮುದಾಯವನ್ನು ಅಶಕ್ತರನ್ನಾಗಿಸಿ, ಕಾರ್ಪೊರೇಟ್ ಮರ್ಜಿಗೆ ದೂಡುವ ಹುನ್ನಾರವನ್ನು ಹೊಂದಿದೆ ಎಂದು ಬಲವಾಗಿ ಖಂಡಿಸಿದ್ದಾರೆ. 

ಸರ್ಕಾರದ ಈ ನಿರ್ಧಾರಗಳು ರೈತರ ಮೇಲಿನ ತೀವ್ರ ದಾಳಿಗಳಾಗಿದ್ದು, ಇವು ನವ ಉದಾರವಾದಿ ಆರ್ಥಿಕ ಧೋರಣೆಯನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುವ ಮತ್ತು ಕಾರ್ಪೋರೇಟ್ ಕಂಪನಿಗಳ ಲೂಟಿಕೋರ ಕ್ರಮಗಳಾಗಿವೆ. ರೈತರು, ಕೃಷಿ ಕೂಲಿಕಾರರು ಹಾಗೂ ಮೀನುಗಾರಿಕೆ, ರೇಷ್ಮೆ ಮುಂತಾದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರು ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಲಾಕ್ ಡೌನ್ ನಿಂದಾಗಿ ಅನುಭವಿಸಿರುವ ದೊಡ್ಡ ಆದಾಯ ನಷ್ಟ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟ ಸದಸ್ಯರು ಚಕಾರವೆತ್ತದೇ ಜಾಣ ಕುರುಡುತನ ತೋರುತ್ತಿದೆ. ರೈತರ ಸಾಲ ಮನ್ನಾ ಮಾಡುವ ಕ್ರಮಗಳನ್ನು ಕೈಗೊಳ್ಳದೇ ಕೃಷಿಕರನ್ನು ಲೂಟಿಗೊಳಪಡಿಸುವ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ. 

ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರಿವಾಜ್ಞೆ ೨೦೨೦’ ಹಾಗೂ ‘ಬೆಲೆ ಖಾತರಿ, ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದದ ಸುಗ್ರಿವಾಜ್ಞೆ ೨೦೨೦’ಗಳಿಗೆ ವಿವೇಚನೆರಹಿತವಾಗಿ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸಂವಿಧಾನದ ಒಕ್ಕೂಟ ತತ್ವಗಳ ಆಶಯಗಳಿಗೆ ವಿರುದ್ಧವಾಗಿದೆ. ಈ ಸುಗ್ರಿವಾಜ್ಞೆ ಗಳು ರೈತರನ್ನು, ಕೃಷಿ ವಾಣಿಜ್ಯ ಸಂಸ್ಥೆಗಳ, ದೊಡ್ಡ ವ್ಯಾಪಾರಸ್ಥರ ಮತ್ತು ರಪ್ತುದಾರರ ಮರ್ಜಿಗೀಡು ಮಾಡುತ್ತವೆ. ಅಗತ್ಯ ವಸ್ತುಗಳ ಕಾಯ್ದೆಯ ತಿದ್ದುಪಡಿಗಳು, ಖಾಸಗಿ ವಹಿವಾಟುದಾರರ ಹಾಗೂ ಕೃಷಿ ವ್ಯವಹಾರ ಸಂಸ್ಥೆಗಳ ಮೇಲಿನ ಎಲ್ಲಾ ನಿರ್ಬಂದಗಳು ಹಾಗೂ ನಿಯಂತ್ರಣಗಳನ್ನು ತೆಗೆದು ಹಾಕಲಿದೆ. ಇದರಿಂದ ಗ್ರಾಹಕರು ಇವರ ಕಾರ್ಪೋರೇಟ್ ಕಂಪನಿಗಳ ಕಾಳಸಂತೆಗೆ ತುತ್ತಾಗಿ ವ್ಯಾಪಕ ಲೂಟಿಗೊಳಗಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಸರ್ಕಾರ, ಭಾರತಕ್ಕೆ ೧೯೪೭ ರಲ್ಲೇ ಸ್ವಾತಂತ್ರ್ಯ ಬಂದರೂ, ರೈತರು ನೆನ್ನೆ ಮಾತ್ರ ವಿಮೋಚಿತರಾಗಿದ್ದಾರೆ ಎಂಬ ಉಡಾಫೆಯ ಹೇಳಿಕೆ ನೀಡಿ, ಸ್ವಾತಂತ್ರ್ಯ ಚಳುವಳಿಗೆ ಅಪಮಾನ ಮಾಡಿದ್ದಾರೆ. ಈ ಎರಡು ಸುಗ್ರಿವಾಜ್ಞೆ ಗಳನ್ನು ಹಾಗೂ ಅಗತ್ಯ ವಸ್ತುಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರಿವಾಜ್ಞೆ ೨೦೨೦ ಸಹ ರೈತ ವಿರೋಧಿಯಾಗಿದೆ. ರೈತರಿಂದ ಕಡಿಮೆ ದರಕ್ಕೆ ಧಾನ್ಯ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮುಕ್ತವಾಗಿ ಲೂಟಿ ಮಾಡುತ್ತಿದ್ದ ದೊಡ್ಡ ವ್ಯಾಪಾರಸ್ಥರು ಹಾಗೂ ದೊಡ್ಡ ಖರೀದಿದಾರರನ್ನು ನಿಯಂತ್ರಿಸಲು ೧೯೬೦ ಹಾಗೂ ೧೯೭೦ ರ ದಶಕದಲ್ಲಿ ಈ ಎಪಿಎಂಸಿ ಕಾಯ್ದೆಗಳನ್ನು ಪರಿಚಯಿಸಲಾಗಿತ್ತು. ಇದೊಂದು ಚಾರಿತ್ರಿಕ ನಡೆಯಾಗಿತ್ತು. ಆದರೇ, ಯಾವಾಗಲೂ ಪರಿಣಾಮಕಾರಿಯಾಗಿ ಇವುಗಳನ್ನು ಜಾರಿಗೆ ತರಲಾಗದಿದ್ದಾಗ್ಯೂ, ಈ ಕಾಯ್ದೆಗಳು ಹರಾಜು ವ್ಯವಸ್ಥೆಯನ್ನು ಪರಿಚಯಿಸಿದ್ದರಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚು ಸ್ಪರ್ಧಾತ್ಮಕ ಗೊಳಿಸಿದ್ದವು. ಇದೀಗ, ವ್ಯಾಪರಸ್ಥರು ಹಾಗೂ ದೊಡ್ಡ ಖರೀದಿದಾರರಿಗೆ ಮಂಡಿಗಳಾಚೆ ರೈತರಿಂದ ನಿಯಂತ್ರಣ ಮುಕ್ತವಾಗಿ, ನೇರ ಖರೀದಿಗೆ ಅವಕಾಶ ನೀಡುವುದೆಂದರೆ, ಹರಾಜಿಲ್ಲದೇ ಉತ್ಪನ್ನಗಳನ್ನು ದೊಡ್ಡ ವ್ಯಾಪಾರಿಗಳು, ಬಡ ರೈತರಿಂದ ಚೌಕಾಸಿಯಲ್ಲಿ ಲಪಟಾಯಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದಿದ್ದಾರೆ.