ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

State Farmers Union, Hasiru Sene protest for fulfillment of various demands

ಬೆಳಗಾವಿ 16: ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿ ಹಾಗೂ ವಿವಿಧ ರೈತ ಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.   

ರೈತರು ಬೆಳೆದ ಬಳೆಗಳಿಗೆ ಯೋಗ್ಯ ಬೆಲೆ ಸಿಗಬೇಕು. ಟನ್ ಕಬ್ಬಿಗೆ ಕಾರ್ಖಾನೆಗಳಿಂದ ಸರಕಾರಕ್ಕೆ ಹೋಗುತ್ತಿರುವ 5 ಸಾವಿರ ರೂ.ಗಳ ತೆರಿಗೆ ಹಣದಲ್ಲಿಯ 2 ಸಾವಿರ ರೂ.ಗಳನ್ನು ರೈತರಿಗೆ ನೀಡಬೇಕು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ನಿಗದಿಪಡಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಕಾಯ್ದೆ ತಿದ್ದುಪಡಿ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಹಗಲು ಹೊತ್ತು ನಿರಂತರ 12 ಗಂಟೆ ಥ್ರೀ ಫೇಸ್ ವಿದ್ಯುತ್ ಹಾಗೂ ರಾತ್ರಿ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಕಡ್ಡಾಯವಾಗಿ ಪೂರೈಕೆ ಮಾಡಬೇಕು. ಅಕ್ರಮ-ಸಕ್ರಮ ಹಾಗೂ ಶೀಘ್ರ ಸಂಪರ್ಕ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.  

ಭತ್ತದ ಬೆಳೆಗೆ ಕನಿಷ್ಠ ಪ್ರತಿ ಕ್ವಿಂಟಾಲಗೆ 5. ಸಾವಿರ ರೂ.ದರ ನೀಡಬೇಕು. ದ್ರಾಕ್ಷಿ (ಒಣ) ಬೆಳೆಗೆ ಪ್ರತಿ ಕೆಜಿಗೆ 400 ರೂ. ಬೆಂಬಲ ಬೆಲೆ ನೀಡಬೇಕು. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. (ವಕ್ಷ ಕಾಯ್ದೆ, ಭೂ ಸುಧಾರಣೆ ಕಾಯ್ದೆಯ 70ಂಃ ಪರಿಷ್ಕರಣೆ, ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆಯನ್ನು ಸದೃಢಗೊಳಿಸಬೇಕು) ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ರಾಜ್ಯದಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪುನಃಚೇತನಗೊಳಿಸಬೇಕು. ಮಹದಾಯಿ, ಕಳಸಾ ಬಂಡೂರಿ ಮೇಕೆದಾಟು ಯೋಜನೆ ಸೇರಿದಂತೆ ಬಾಕಿ ಉಳಿದ ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಆಲಮಟ್ಟಿ ಜಲಾಶಯವನ್ನು ಮೇಲ್ದರ್ಜೇಗೇರಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಪ್ರಕಾಶ ನಾಯ್ಕ, ಚೂನಪ್ಪ ಪೂಜೇರಿ ಕಿಶನ್ ನಂದಿ, ಶರಣಪ್ಪ ದೊಡ್ಡಮನಿ, ರೇಣುಕಾ ಹೊಸುರ ಸೇರಿದಂತೆ ಇತರರು ಇದ್ದರು.