ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ: ಎನ್.ಚೆಲುವರಾಯಸ್ವಾಮಿ

Guarantee scheme not stopped for any reason: N. Cheluvarayaswamy

ಮದ್ದೂರು 23: ಬಡವರ ಏಳಿಗೆಗಾಗಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಜೆಡಿಎಸ್, ಬಿಜೆಪಿಯವರ ಮಾತಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಕೊಪ್ಪ ಕೆರೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪ ಕೆರೆಯಿಂದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಯಲು ಕಾಲುವೆ ಮತ್ತು ನಾಲೆಗಳ ನಿರ್ಮಾಣ ಸೇರಿದಂತೆ ನೀರಾವರಿ ಇಲಾಖೆಗೆ ಸುಮಾರು 100 ಕೋಟಿ ಹಣ ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಲಾಗುವುದು. ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯಿಂದ ಕೊಪ್ಪದವರೆಗೆ ಜೋಡಿ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕೊಪ್ಪವನ್ನು ಪಟ್ಟಣದ ಪಂಚಾಯಿತಿ ಮಾಡುವ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅರ್ಹ ಮಹಿಳಾ ಫಲಾನುಭವಿಗಳಿಗೆ 2 ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ಬಂದಿಲ್ಲ. ಆದರೆ ಆದಷ್ಟು ಬೇಗ ಯೋಜನೆಯಡಿ ಹಣ ಖಾತೆಗಳಿಗೆ ಜಮೆಯಾಗಲಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.