ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿaದ ಸ್ಟಾರ್ ಏರ್ ವಿಮಾನ

ಕಲಬುರಗಿ,  ಮೇ 25, ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸಂಚಾರ  ಪುನರಾರಂಭಗೊಂಡ‌ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನಿಂದ ಸ್ಟಾರ್ ಏರ್ ಸಂಸ್ಥೆಯ  ವಿಮಾನವು ಪ್ರಥಮ ಬಾರಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು.ಇಂದು ಬೆಳಿಗ್ಗೆ 8.40 ಗಂಟೆಗೆ 25 ಜನ ಯಾತ್ರಿಕರನ್ನು ಕರೆದುಕೊಂಡು ಹೊರಟ ವಿಮಾನ 9.30 ಗಂಟೆಗೆ ಕಲಬುರಗಿ ನೆಲದಲ್ಲಿ ಭೂ ಸ್ಪರ್ಶ ಮಾಡಿತು.ತದನಂತರ 10.20 ಗಂಟೆಗೆ ಕಲಬುರಗಿಯ 20 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ದೇಶಿಯ  ವಿಮಾನಯಾನ ಸೇವೆಗೆ ಕೆಲ ದಿನಗಳ ಹಿಂದೆ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ  ತೋರಿಸಿದ್ದರಿಂದ ಇಂದಿನಿಂದ ದೇಶದಾದ್ಯಂತ ಕೊರೊನಾ ಹರಡದಂತೆ ಸುರಕ್ಷತಾ ಕ್ರಮದೊಂದಿಗೆ  ವಿಮಾನಯಾನ ಸಂಚಾರವು ಆರಂಭಗೊಂಡಿದೆ.ಭಾರತೀಯ  ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ  ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಪ್ರತಿ ಪ್ರಯಾಣಿಕನಿಂದ  ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ, ಆರೋಗ್ಯ ಸೇತು  ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಲಗೇಜ್‍ಗಳನ್ನು ಡಿಸಿನ್ಫೆಕ್ಟ್  ಮಾಡಿಯೇ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು, ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ  ಸ್ಕ್ರೀನಿಂಗ್ ಮಾಡಲಾಗುವುದಲ್ಲದೇ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ  ಸಿಬ್ಬಂದಿಗಳು  ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ  ಜ್ಣಾನೇಶ್ವರ ರಾವ್ ತಿಳಿಸಿದರು.ಇಂದಿನಿಂದ  ಸ್ಟಾರ್ ಏರ್ ಸಂಸ್ಥೆಯು ತನ್ನ ವಿಮಾನ ಸಂಚಾರ ಸೇವೆ ಆರಂಭಿಸಿದ್ದು, ಅಲಾಯನ್ಸ್ ಏರ್ ಸಹ  ಶೀಘ್ರದಲ್ಲಿಯೆ ಸೇವೆ ಆರಂಭಿಸಲಿದೆ ಎಂದು ಜ್ಣಾನೇಶ್ವರ ತಿಳಿಸಿದ್ದಾರೆ.