ಶ್ರೀನಗರ, ನ 11 : ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಹಾಗೂ ಮಧ್ಯ ಕಾಶ್ಮೀರದ ಬಡ್ಗಮ್ ಪ್ರದೇಶದ ನಡುವೆ ಕಳೆದ 99 ದಿನಗಳಿಂದ ಸ್ಥಗತಗೊಂಡಿದ್ದ ರೈಲು ಸಂಚಾರ ಮಂಗಳವಾರದಿಂದ ಪುನಾರಂಭಗೊಳ್ಳಲಿದ್ದು, ಸೋಮವಾರ ಪ್ರಾಯೋಗಿಕ ಸಂಚಾರ ನಡೆಸಿತು.
ಜೊತೆಗೆ, ಶ್ರೀನಗರ ಮತ್ತು ಬನಿಹಾಲ್ ಪ್ರದೇಶದ ನಡುವಿನ ಪ್ರಾಯೋಗಿಕ ರೈಲು ಸಂಚಾರ ನ.16ರಂದು ಕೊನೆಗೊಳ್ಳಲಿದ್ದು, ನ.17ರಂದು ರೈಲು ಸಂಚಾರ ಪುನಾರಂಭಗೊಳ್ಳಲಿದೆ.
ವಿಭಾಗೀಯ ಅಧಿಕಾರಿಗಳು ರೈಲ್ವೆ ಇಲಾಖೆಗೆ ನೀಡಿದ ನಿರ್ದೇಶನದ ಬೆನ್ನಲ್ಲೇ ಈ ರೈಲು ಸೇವೆ ಪುನಾರಂಭಗೊಳ್ಳಲಿದೆ. ಆಗಸ್ಟ್ 5ರಂದು ಈ ಸೇವೆ ಸ್ಥಗಿತಗೊಂಡಿತ್ತು.
ರೈಲ್ವೆ ಅಧಿಕಾರಿಯೊಬ್ಬರು ಯುಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಸೋಮವಾರ ಶ್ರೀನಗರ-ಬರಾಮುಲ್ಲಾ ರೈಲ್ವೆ ಹಳಿಯ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಆದ್ದರಿಂದ ಮಂಗಳವಾರದಿಂದ ಹಿಂದಿನಂತೆ ರೈಲು ಸೇವೆ ಮುಂದುವರಿಯಲಿದೆ ಎಂದಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಭದ್ರತಾ ಕಾರಣಕ್ಕಾಗಿ ಉತ್ತರ ಕಾಶ್ಮೀರದ ಬರಾಮುಲ್ಲದಿಂದ ಜಮ್ಮು ಪ್ರದೇಶದ ಬನಿಹಾಲ್ ಪ್ರದೇಶಕ್ಕೆ ಶ್ರೀನಗರ, ಅನಂತನಾಗ್ ಮತ್ತು ಕಾಜಿಗುಂಡ್ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ರೈಲ್ವೇ ಇಲಾಖೆಗೆ 2.97 ಕೋಟಿ ರೂ. ನಷ್ಟ ಉಂಟಾಗಿತ್ತು.