ಫಿಕ್ಸಿಂಗ್ ಆರೋಪ, ಲಂಕಾ ಕ್ರಿಕೆಟಿಗ ತರಂಗ ವಿಚಾರಣೆ

ಕೊಲಂಬೊ, ಜು 1: 2011ರ ವಿಶ್ವ ಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂಬ ಆರೋಪ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ಸಂಬಂಧ ಶ್ರೀಲಂಕಾದ ಆರಂಭಿಕ ಆಟಗಾರ ಉಪುಲ್ ತರಂಗ ವಿಚಾರಣೆಗೆ ಒಳಪಟ್ಟ ಮೊದಲ ಆಟಗಾರ ಎನಿಸಿದ್ದಾರೆ.

ಭಾರತ ವಿರುದ್ಧ ಸೋಲನುಭವಿಸಿದ ಶ್ರೀಲಂಕಾ ತಂಡವು ಫೈನಲ್ ನಲ್ಲಿ ನಡೆದುಕೊಂಡ ಕುರಿತು 35 ವರ್ಷದ ತರಂಗ ಅವರನ್ನು ವಿಶೇಷ ತನಿಖಾ ಘಟಕ (ಎಸ್ ಐಯು) ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ''ಪ್ರಗತಿಯಲ್ಲಿರುವ ಫಿಕ್ಸಿಂಗ್ ತನಿಖೆಯ ಸಂಬಂಧ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ನನ್ನ  ಹೇಳಿಕೆಯನ್ನು ನೀಡಿದ್ದೇನೆ, '' ಎಂದು ತರಂಗ ವರದಿಗಾರರಿಗೆ ಬುಧವಾರ ತಿಳಿಸಿದ್ದಾರೆ.

ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತರಂಗ 20 ಎಸೆತಗಳನ್ನೆದುರಿಸಿ ಕೇವಲ 2 ರನ್ ಮಾತ್ರ ಗಳಿಸಿದ್ದರು. ಫಿಕ್ಸಿಂಗ್ ಆರೋಪ ಕುರಿತು ಮಂಗಳವಾರವಷ್ಟೇ ಮುಖ್ಯ ಆಯ್ಕೆಗಾರ ಅರವಿಂದ್ ಡಿಸಿಲ್ವಾ ಅವರನ್ನು ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮಗೆ 2011ರ ವಿಶ್ವ ಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿದ್ದು, ಭಾರತಕ್ಕೆ ಮಾರಾಟ ಮಾಡಲಾಗಿತ್ತು ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಈ ತನಿಖೆ ಕೈಗೊಳ್ಳಲಾಗಿದೆ.