ಲಾಹೋರ್, ಅ. 9: ಟಿ-20 ಕ್ರಿಕೆಟ್ ಸರಣಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಆತಿಥೇಯ ಪಾಕಿಸ್ತಾನ ತಂಡ, ಬುಧವಾರ ಪ್ರವಾಸಿ ಶ್ರೀಲಂಕಾ ವಿರುದ್ದ ಮೂರನೇ ಪಂದ್ಯ ಆಡಲು ಅಖಾಡ ಪ್ರವೇಶಿಸಲಿದ್ದು, ಮಾನ ಉಳಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯನ್ನು ಶ್ರೀಲಂಕಾ ಈಗಾಗಲೇ 2-0ಯಿಂದ ಗೆದ್ದು ಕೊಂಡಿದ್ದು. ಈ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಇರಾದೆ ಹೊಂದಿದೆ. ಭರ್ಜರಿ ಫಾರ್ಮ್ ನಲ್ಲಿರುವ ಶ್ರೀಲಂಕಾ ತಂಡದ ಸ್ಟಾರ್ ಆಟಗಾರರು ತಂಡ ಗೆಲುವಿನಲ್ಲಿ ಮಿಂಚೋಕೆ ಯೋಜನೆ ರೂಪಿಸಿಕೊಂಡಿದ್ದಾರೆ. ಪಾಕ್ ಬ್ಯಾಟ್ಸ್ ಮನ್ ಗಳು ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಲು ರಣ ತಂತ್ರ ಹೆಣೆದುಕೊಂಡಿದ್ದಾರೆ. ಆರಂಭಿಕರು ತಂಡಕ್ಕೆ ದೊಡ್ಡ ಜೊತೆಯಾಟದ ಕಾಣಿಕೆ ನೀಡುವ ಅವಶ್ಯಕತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕಬೇಕಿದೆ. ತಮ್ಮ ಶರವೇಗದ ದಾಳಿಯಿಂದ ಎದುರಾಳಿಗಳನ್ನು ಕಾಡುವ ಸ್ಟಾರ್ ಬೌಲರ್ಸ್ ಸರಿಯಾದ ಲೈನ್ ಹಾಗೂ ಲೆಂಥ್ ಮೂಲಕ ದಾಳಿಯನ್ನು ನಿರ್ವಹಿಸಬೇಕಿದೆ. ಅಂದಾಗ ಮಾತ್ರ ಗೆಲುವಿನ ನಗೆ ಬೀರಲು ಸಾಧ್ಯ.