ಕೆಂಪು ಕೋಟೆ ಬಳಿ ಸ್ಪೋಟ ಹಿನ್ನೆಲೆ ಸ್ಕ್ವಾಡದಳದ ಪರೀಶೀಲನೆ

ಕೆಂಪು ಕೋಟೆ ಬಳಿ ಸ್ಪೋಟ ಹಿನ್ನೆಲೆ ಸ್ಕ್ವಾಡದಳದ ಪರೀಶೀಲನೆ Squad inspects the background of the explosion near the Red Fort

ಕಾರವಾರ 11: ದೆಹಲಿ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ನಡೆದ   ಸ್ಪೋಟ ಪ್ರಕರಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸೋಮವಾರ ದೆಹಲಿಯಿಂದ ಅಹಿತಕರ ಮಾಹಿತಿ ಬರುತ್ತಿದ್ದಂತೆ ಬಂದರು ನಗರ ಕಾರವಾರದಲ್ಲಿ ಪೊಲೀಸರು ಚುರುಕಾದರು. ಎಸ್ಪಿ ದೀಪನ್ ಅವರ ಮಾರ್ಗದರ್ಶನದಲ್ಲಿ ಕಾರವಾರ  ಬಂದರು ಪ್ರದೇಶಕ್ಕೆ ಬಂದ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಬಂದರಿನ ಆಯಕಟ್ಟಿನ ಸ್ಥಳಗಳಲ್ಲಿ ಸ್ಪೋಟಕಗಳು ಇವೆಯೇ ಎಂದು ಪರೀಶೀಲನೆ ನಡೆಸಿತು. ಅಲ್ಲದೇ ಕೈಗಾ , ಸೀಬರ್ಡ ನೌಕಾನೆಲೆಯಲ್ಲಿ ಜಾಗ್ರತೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿತು. ನೌಕಾದಳದ ಮುಖ್ಯಸ್ಥರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಬಿಗಿ ಬಂದೋಬಸ್ತ ಮಾಡಲಾಯಿತು. ಸಶಸ್ತ್ರ ಕಾವಲು ಹೆಚ್ಚಿಸಲಾಯಿತು. ಕೈಗಾ ಅಣುಸ್ಥಾವರದಲ್ಲಿ ಸಿಐಎಸ್ ಎಫ್ ಸಿಬ್ಬಂದಿ ಹೆಚ್ಚಿನ ಕಾವಲು ಹಾಕಿತು.ಅಣೆಕಟ್ಟುಗಳಲ್ಲಿ ಹೆಚ್ಚಿನ ಕಾವಲು: ಜಿಲ್ಲೆಯ ಕದ್ರಾ ಅಣೆಕಟ್ಟು, ಕೊಡಸಳ್ಳಿ ಅಣೆಕಟ್ಟು, ಸುಫಾ ಅಣೆಕಟ್ಟು ಬಳಿ ಪೊಲೀಸ್ ಕಾವಲು ಹೆಚ್ಚಿಸಲಾಯಿತು. ತಟ್ಟಿಹಳ್ಳ ,ಬೊಮ್ಮನಹಳ್ಳಿ ಪಿಕ್ ಅಪ್ ಡ್ಯಾಂ ಬಳಿ ಕೆಪಿಸಿ ಕಾವಲು ಹೆಚ್ಚಿಸಿ, ಹೆಚ್ಚಿನ ಭದ್ರತೆ ಹಾಕಲಾಯಿತು.ಮಂಗಳವಾರ ಆಯ ಕಟ್ಟಿನ ಸ್ಥಳಗಳಲ್ಲಿ ಬಾಂಬ್ ಸ್ಕ್ವಾಡದಳದ ಪರೀಶೀಲನೆ ಮುಂದುವರಿಸಿದೆ. ಮಂಗಳವಾರ ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದ ಕಲಾಪ ಆರಂಭಕ್ಕೆ ಮುನ್ನ ನ್ಯಾಯಾಲಯದ ಆವರಣ , ಕಲಾಪ ನಡೆಯುವ ಚೇಂಬರ್ ಹಾಗೂ  ಪ್ರಧಾನ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಕ್ವಾಡ್ ದಳ ಪರೀಶೀಲನೆ ಮಾಡಿತು. ಹಾಗೆ ನ್ಯಾಯಾಲಯಗಳ ಆವರಣದಲ್ಲಿ ಶ್ವಾನದಳದಿಂದಲೂ ಪರೀಕ್ಷೆ  ಮಾಡಲಾಯಿತು. ಮುರುಡೇಶ್ವರದಲ್ಲೂ ಬಾಂಬ್ ನಿಷ್ಕ್ರೀಯದಳದಿಂದ ಮಧ್ಯಾಹ್ನ  ಪರೀಶೀಲನೆ ನಡೆಯಿತು.  ಧಾರ್ಮಿಕ ಕ್ಷೇತ್ರಗಳಲ್ಲಿ , ಪ್ರವಾಸಿ ತಾಣಗಳಲ್ಲಿ ಸಹ ಪೊಲೀಸ್ ಕಾವಲು ಹೆಚ್ಚಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ  ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು  ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ.