ದೈಹಿಕ, ಮಾನಸಿಕ ಆರೋಗ್ಯದ ಸದೃಢತೆಗೆ ಕ್ರೀಡೆ ಸಹಕಾರಿ: ಗಣಪತಿ ಉಳ್ವೇಕರ್
ಕಾರವಾರ, 19 : ನಿರಂತರವಾಗಿ ಕೆಲಸದ ಒತ್ತಡದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸದೃಢತೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು. ಅವರು ಶನಿವಾರ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ದಿನದ ಕರ್ತವ್ಯದಲ್ಲಿ ನಿರತರರಾಗಿರುವ ಸರ್ಕಾರಿ ನೌಕರರಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿತಾಸಕ್ತಿಯಿಂದ ಸರ್ಕಾರ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ. ಕ್ರೀಡೆಯಲ್ಲಿ ಸ್ಪರ್ಧಿಸುವವರು ನಿರ್ಣಾಯಕ ನಿರ್ಣಯಕ್ಕೆ ಬದ್ದರಾಗಿ ಮತ್ತು ಕ್ರೀಡಾ ನಿಯಮಗಳನ್ನು ಅನುಸರಿಸಿ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳಬೇಕು, ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿಲಿ ಎಂದು ಹಾರೈಸಿದರು. ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಎಂ ಹಬೀಬ್ ಮಾತನಾಡಿ, ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ವಿಜೇತರಾಗಿ ಜಿಲ್ಲೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂದರು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸಂಜೀವಕುಮಾರ ಎಸ್. ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿ, ಒತ್ತಡದಲ್ಲಿ ಕಾರ್ಯ ನಿರ್ವವಹಿಸುತ್ತಿರುವ ನೌಕರರಿಗೆ ವಿಶ್ರಾಂತಿ, ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವ ಹಿತದೃಷ್ಠಿಯಿಂದ ಈ ಕ್ರೀಡಾ ಕೂಟವನ್ನು ಆಯೋಜನೆ ಮಾಡಲಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ನೌಕರರ ಸಂಘದ ಪ್ರಯತ್ನದಿಂದ ನ್ಯಾಷನಲ್ ಬ್ಯಾಂಕ್‌ನಲ್ಲಿ ಸ್ಯಾಲರಿ ಪ್ಯಾಕೇಜ್ ಅಕೌಂಟ್ ತೆರೆಯಲು ಕಾಂಗ್ರೆಸ್ ಸಿದ್ದರಾಮಯ್ಯ ನವರಸರ್ಕಾರ ಆದೇಶ ಮಾಡಿ,ನೌಕರರಿಗೆ ಉಪಕಾರ ಮಾಡಿದೆ ಎಂದರು.
ಇದರಿಂದ ಅನೇಕ ಸೌಲಭ್ಯಗಳನ್ನು ದೊರೆಯಲಿವೆ. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಸರ್ಕಾರಿ ನೌಕರರು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯದರ್ಶಿ ರಮೇಶ್ ಎನ್ ನಾಯ್ಕ, ಖಜಾಂಜಿ ಕೃಷ್ಣಭಟ್, ರಾಜ್ಯ ಪರಿಷತ್ ಸದಸ್ಯ ಸುರೇಶ ಶೆಟ್ಟಿ, ಗೌರವಧ್ಯಕ್ಷ ಎಮ್. ಆರ್. ನಾಯ್ಕ, ತಾಲೂಕು ಅಧ್ಯಕ್ಷರಾದ ಸಂತೋಷ ಸಾಳುಂಕೆ, ಸುರೇಶ್ ನಾಯಕ, ಬಾಲಚಂದ್ರ ಡಿ ನಾಯಕ, ಸುಭಾಷಚಂದ್ರ ಆರ್. ನಾಯ್ಕ, ಸಂಜೀವಕುಮಾರ್ ಹೊಸ್ಕೇರಿ, ಅಣ್ಣಪ್ಪ ಟಿ. ಮುಕ್ರಿ, ಸತೀಶ್ ನಾಯಕ, ಎಂ.ಎನ್.ನಾಯ್ಕ, ಸರಕಾರಿ ನೌಕರರು ಮತ್ತಿತರರು ಉಪಸ್ಥಿತರಿದ್ದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ನೌಕರರ ಸಂಘದ ಅಧ್ಯಕ್ಷ ಕಿರಣ ಕುಮಾರ್ ಎಚ್ ನಾಯ್ಕ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಸ್ವಾಗತಿಸಿದರು.