ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ 600 ವಿಕೆಟ್ ಸಾಧನೆಯ ಸವಿ ನೆನಪು

ನವದೆಹಲಿ, ಜ 17 :    ಭಾರತದ ಸ್ಪಿನ್ ದಂತಕತೆ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆಕರ್ಷಕ ಸ್ಪಿನ್ ಬೌಲಿಂಗ್ ನಿಂದಾಗಿ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ನಡುಕ ಉಂಟು ಮಾಡಿದ್ದರು. 600 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂದ ಸಾಧನೆಗೆ ಇಂದಿಗೆ 12 ವರ್ಷಗಳು ತುಂಬಿದೆ.

ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ 2007/08ನೇ ಆವೃತ್ತಿಯಲ್ಲಿ 2008 ಜ 17 ರಂದು ಪರ್ತ್ ಅಂಗಳದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ಮೈಲುಗಲ್ಲು ಸ್ಥಾಪಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾರತ ತಂಡ ಪ್ರಥಮ ಇನಿಂಗ್ಸ್ ನಲ್ಲಿ 330 ರನ್ ಗಳಿಸಿತ್ತು. 93 ರನ್ ಗಳಿಸಿದ್ದ ರಾಹುಲ್ ದ್ರಾವಿಡ್ ಭಾರತದ ಪರ ವೈಯಕ್ತಿಕ ಹೆಚ್ಚು ರನ್ ಗಳಿಸಿದ್ದರು. ಬಳಿಕ ಆಸ್ಟ್ರೇಲಿಯಾ ತಂಡವನ್ನು ಭಾರತ 294 ರನ್ ಗಳಿಗೆ ಆಲೌಟ್ ಮಾಡಿತ್ತು. ಆ್ಯಂಡ್ರೊ ಸೈಮಂಡ್ಸ್ ಅವರನ್ನು ಔಟ್ ಮಾಡುವ ಮೂಲಕ ಅನಿಲ್ ಕುಂಬ್ಳೆ 600 ವಿಕೆಟ್ ಸಾಧನೆ ಮಾಡಿದ್ದರು.

ಈ ಪಂದ್ಯದಲ್ಲಿ ಪ್ರವಾಸಿ ಭಾರತ ಜಯ ಸಾಧಿಸಿತ್ತು. ಅಲ್ಲದೆ, ಪರ್ತ್ ಅಂಗಳದಲ್ಲಿ ಮೊಟ್ಟ ಮೊದಲ ಗೆಲುವು ಇದಾಗಿತ್ತು. ಈ ಸರಣಿಯಲ್ಲಿನ ಸಿಡ್ನಿಯಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಹರಭಜನ್ ಸಿಂಗ್ ಹಾಗೂ ಸೈಮಂಡ್ಸ್ ನಡುವೆ ವಾಗ್ದಾಳಿ ನಡೆದಿತ್ತು. ಇದನ್ನು ‘ಮಂಕಿ ಗೇಟ್ ಹಗರಣ’ ಎಂದು ಕರೆಯಲಾಗಿತ್ತು.ಟೆಸ್ಟ್ ಕ್ರಿಕೆಟ್ ನಲ್ಲಿ 619 ವಿಕೆಟ್ ಪೂರೈಸಿದ ಅನಿಲ್ ಕುಂಬ್ಳೆ ಅದೇ ವರ್ಷ ದೀರ್ಘಾವಧಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರನ್ (800) ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ (708) ಎರಡನೇ ಸ್ಥಾನದಲ್ಲಿದ್ದ.