ಸ್ಪಿನ್‌ ದಿಗ್ಗಜ ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ

ನವದೆಹಲಿ, ಫೆ 7, ಭಾರತ ತಂಡದ ಮಾಜಿ ಸ್ಪಿನ್ನರ್‌ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್‌ ಕುಂಬ್ಳೆ ಎಂದಾಕ್ಷಣ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಸಾಧನೆ ನಮ್ಮ ನೆನಪಿಗೆ ಬರುತ್ತದೆ. ಸ್ಪಿನ್ ದಂತಕತೆಯೆ ಈ ಸಾಧನೆಯನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಕನ್ನಡಿಗ ಹಾಗೂ ಸ್ಪಿನ್ ದಿಗ್ಗಜನ ಈ ಸಾಧನೆಗೆ ಇದೀಗ 21 ವರ್ಷಗಳು ತುಂಬಿದೆ.1999ರ ಫೆ 7 ರಂದು ಇಲ್ಲಿನ ಫಿರೋಜ್‌ ಶಾ ಕೋಟ್ಲಾ (ಈಗಿನ ಅರುಣ್ ಜೆಟ್ಲಿ ಮೈದಾನ) ಕ್ರೀಡಾಂಗಣದಲ್ಲಿ ಅನಿಲ್ ಕುಂಬ್ಲೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಆ  ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್‌ ಎನಿಸಿಕೊಂಡಿದ್ದರು. ಇದಕ್ಕೂ ಮುನ್ನ ಜಿಕ್ ಲ್ಯಾಕರ್ ಈ ಸಾಧನೆ ಮಾಡಿದ್ದರು.

ಎರೆಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲನೇ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಸೋಲು ಅನುಭವಿಸಿತ್ತು. ದೆಹಲಿ ಪಂದ್ಯದಲ್ಲಿ ಸರಣಿ ಸಮಬಲ ಸಾಧಿಸಲು ಟೀಮ್ ಇಂಡಿಯಾಗೆ  ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತದ ಬ್ಯಾಟಿಂಗ್ ವಿಭಾಗ ಪಾಕಿಸ್ತಾನಕ್ಕೆ 420 ರನ್ ಗುರಿ ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ, ಅನಿಲ್ ಕುಂಬ್ಳೆ ಸ್ಪಿನ್ ಮ್ಯಾಜಿಕ್‌ಗೆ ಮಕಾಡೆ ಮಲಗಿತ್ತು. ಎಲ್ಲ 10 ವಿಕೆಟ್‌ಗಳನ್ನು ಕುಂಬ್ಳೆ ಕಿತ್ತರು. ಪಾಕಿಸ್ತಾನ ಕೇವಲ 207 ರನ್‌ಗಳಿಗೆ ಸರ್ವಪತನ ಕಂಡಿತು. ಅಂದು ಕುಂಬ್ಳೆಗೆ ಕೇವಲ 19 ವರ್ಷ ವಯಸ್ಸಾಗಿತ್ತು.ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ, ವಿಕೆಟ್ ನಷ್ಟವಿಲ್ಲದೆ 101 ರನ್ ಗಳಿಸಿ ಉತ್ತಮ ಆರಂಭ ಕಂಡಿತ್ತು. ನಂತರ ಚೆಂಡು ಕೈಗೆತ್ತಿಕೊಂಡ ಅನಿಲ್ ಕುಂಬ್ಳೆ ಪಾಕಿಸ್ತಾನವನ್ನು 128ಕ್ಕೆ 6 ವಿಕೆಟ್ ಕಬಳಿಸಿದರು. ಶಾಹೀದ್ ಅಫ್ರಿದಿ, ಐಜಾಝ್ ಅಹಮದ್‌, ಇಂಜಾಮಾಮ್ಉ-ಲ್‌-ಹಕ್ ಬಹುಬೇಗ ವಿಕೆಟ್ ಒಪ್ಪಿಸಿದರು. ಸಯೈದ್ ಅನ್ವರ್ 69 ರನ್ ಪಾಕ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು.

ಕುಂಬ್ಳೆ ಸ್ಪಿನ್ ಬೌಲಿಂಗ್‌ಗೆ ಅತ್ಯುತ್ತಮ ಪ್ರತಿರೋಧ ತೋರಿದ್ದ ಅಂದಿನ ಪಾಕಿಸ್ತಾನ ನಾಯಕ ವಾಸೀಮ್ ಅಕ್ರಮ್ ತಾಳ್ಮೆಯ 43 ರನ್ ಗಳಿಸಿದ್ದರು. ಕೊನೆಗೂ ಕುಂಬ್ಳೆ ಎಸೆತದಲ್ಲಿ ಅಕ್ರಮ್, ವಿವಿಎಸ್‌ ಲಕ್ಮಣ್‌ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು. ಅಂತಿಮವಾಗಿ ಭಾರತ ತಂಡ 212 ರನ್‌ಗಳಿಂದ ಐತಿಹಾಸಿಕ ಜಯ ಸಾಧಿಸಿತ್ತು. ಕುಂಬ್ಳೆ ಎಲ್ಲ 10 ವಿಕೆಟ್ ಪಡೆದು ವಿಶ್ವ ವಿಖ್ಯಾತಿಯಾದರು.