ನೂತನ ಆಟಿಸಂ ಮತ್ತು ಕಲಿಕಾ ನ್ಯೂನತೆ ಶಿಕ್ಷಣ ಕೇಂದ್ರ ಉದ್ಘಾಟನೆ..!
ಕಾಗವಾಡ 06: ಮಕ್ಕಳ ಬೆಳವಣಿಗೆಯ ಪ್ರಮುಖ ಮೈಲಿಗಲ್ಲುಗಳತ್ತ ಪೋಷಕರು ಗಮನಹರಿಸಿ, ಮಕ್ಕಳಲ್ಲಿಯ ಭಾಷೆಯ ಬೆಳವಣಿಗೆ, ಸಾಮಾಜಿಕ ಸಂವಹನ, ಕೌಶಲ್ಯ ಮತ್ತು ನಡವಳಿಕೆಯ ಬದಲಾವಣೆಗಳಿಗೆ ಸಮಯೋಚಿತ ಗಮನ ನೀಡಬೇಕೆಂದು ಸಾಂಗಲಿ ಜಿಲ್ಲಾ ಪರಿಷತ್ತಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ ಯಾದವ ತಿಳಿಸಿದ್ದಾರೆ.
ಅವರು, ಇತ್ತಿಚಿಗೆ ಮಹಾರಾಷ್ಟ್ರದ ಮಿರಜ್ ಪಟ್ಟಣದಲ್ಲಿ ನಿರ್ಮಲ ಆಸ್ಪತ್ರೆಯಲ್ಲಿ ನೂತನ ಆಟಿಸಂ ಮತ್ತು ಕಲಿಕಾ ನ್ಯೂನತೆ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ, ಮಕ್ಕಳಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಮಾರ್ಗದರ್ಶನ ಮಾಡುತ್ತ, ಮಾತನಾಡುತ್ತಿದ್ದರು.
ಡಾ. ಚಂದ್ರಶೇಖರ್ ಹಳಿಂಗಳೆ ಮಾತನಾಡಿ, ಈ ಕೇಂದ್ರದಲ್ಲಿ ಆಟಿಸಂ, ಎಡಿಎಚ್ಡಿ, ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು, ಓದುವ ಮತ್ತು ಬರೆಯುವ ಸಮಸ್ಯೆಗಳು (ಡಿಸ್ಲೆಕ್ಸಿಯಾ), ಮೂರ್ಖತನ ಮತ್ತು ಇತರ ಮಕ್ಕಳ ಬೆಳವಣಿಗೆಯ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಮೂಲಕ ನೀಡಲಾಗುವುದು ಎಂದು ಹೇಳಿದರು.
ಡಾ. ನಿಶಾ ಹಳಿಂಗಳೆ ಮಾತನಾಡಿ, ಮಕ್ಕಳಲ್ಲಿ ಬೆಳೆಯುತ್ತಿರುವ ನ್ಯೂರೋ ಡೆವಲಪ್ಮೆಂಟಲ್ ಮತ್ತು ಕಲಿಕೆಯ ಅಸ್ವಸ್ಥತೆಗಳ ಕುರಿತು ಈ ಕೇಂದ್ರದ ಮೂಲಕ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ದೊರೆಯಲಿದೆ ಎಂದರು.
ಅತಿಥಿಗಳಾದ ಡಾ. ಮಾಧುರಿ ವಾಂಗಪಾಟಿ ಮಾತನಾಡಿ ಮಕ್ಕಳಲ್ಲಿನ ಕಲಿಕೆಯ ತೊಂದರೆಗಳು, ನಡವಳಿಕೆಯ ಸಮಸ್ಯೆಗಳಿಗೆ ಪರಿಹಾರಗಳು ಮತ್ತು ಶೈಕ್ಷಣಿಕ ಬೆಂಬಲದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.
ಈ ಸಂದರ್ಭದಲ್ಲಿ ನಿರ್ಮಲ ಆಟಿಸಂ ಮತ್ತು ಕಲಿಕಾ ಅಸಾಮರ್ಥ್ಯ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ. ಚಂದ್ರಶೇಖರ ಹಳಿಂಗಳೆ, ಸಹ ನಿರ್ದೇಶಕಿ ಡಾ. ನಿಶಾ ಹಳಿಂಗಳೆ, ಡಾ. ರಾಜಕಿರಣ ಸಾಳುಂಕೆ, ಸೂರ್ಯಕಾಂತ ಹಳಿಂಗಳೆ, ಪ್ರಾ. ಡಾ. ಮಾಧುರಿ ವಾಂಗಪಾಟಿ, ಪ್ರೀತಿ ಶಿಂಧೆ ಸೇರಿದಂತೆ ನಿರ್ಮಲ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಮತ್ತು ನಿರ್ವಹಣಾ ಸಿಬ್ಬಂದಿಗಳು ಹಾಗೂ ನಸಿಂರ್ಗ್ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.