ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ

Special Cooperative Training Program

ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ

ಗದಗ 13: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಬುಧವಾರ  ದಿ. ಚೇಂಬರ್ ಆಪ್ ಕಾಮರ್ಸ ಇದರ ಸಭಾಭವನ ಎ.ಪಿ.ಎಂ.ಸಿ. ಯಾರ್ಡ, ಗದಗ ಇದರ ಸಭಾಭವನದಲ್ಲಿ ಜರುಗಿತು.ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಾದ ಡಾ.ಸುರೇಶಗೌಡ ಪಾಟೀಲ ಇವರು ಕಾರ್ಯಕ್ರಮ ಉದ್ಘಾಟಸಿ ಮಾತನಾಡುತ್ತ ಕಲಿಕೆಯು ನಿರಂತರವಾಗಿದ್ದಾಗಿದ್ದು ಜ್ಞಾನದ ಅರಿವು ಮೂಡಿಸುವ ಕೆಲಸವನ್ನು ಇಂತಹ ಮಹಾಮಂಡಳ ಕಾರ್ಯಕ್ರಮಗಳು ನೇರವೆರಿಸುತ್ತಿವೆ. ಗದಗನಲ್ಲಿ 165 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು ನಬಾರ್ಡ ನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಾದ ತಾವುಗಳೆಲ್ಲಾ ಒಂದು ಹಳ್ಳಿಗೆ ಸೇರಿದ ರೈತರ ಹೊಲ ಮತ್ತು ಮನೆಗೆ ತಲುಪಿಸುತ್ತಿದ್ದು, ಪಿ.ಎ.ಸಿ.ಎಸ್‌. ಎಂಬುದು ಗ್ರಾಮೀಣ ಸಾಲಗಾರರೊಂದಿಗೆ ವ್ಯವಹರಿಸುವ, ಸಾಲಗಳನ್ನು ನೀಡುವ ಮತ್ತು ಸಾಲಗಳ ಮರುಪಾವತಿಯನ್ನು ಸಂಗ್ರಹಿಸುವ ಮೂಲ ಸಣ್ಣ ಘಟಕವಾಗಿದೆ. ಇದು ಒಂದು ಕಡೆ ಅಂತಿಮ ಸಾಲಗಾರರ ಮತ್ತು ಇನ್ನೊಂದು ಕಡೆ ಉನ್ನತ ಹಣಕಾಸು ಏಜೆನ್ಸಿಗಳ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅವುಗಳೆಂದರೆ ಆರ್‌.ಬಿ.ಐ/ನಬಾರ್ಡ ಜೀವನೋಪಾಯದ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ರಾಮಸ್ಥರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದು ಇವುಗಳ ಮೂಲ ಉದ್ದೇಶವಾಗಿದೆ. ಪಿಎಸಿಎಸ್ ಬುಡಕಟ್ಟು ಸದಸ್ಯರಿಗೆ ಕೃಷಿಗಾಗಿ ಬಡ್ಡಿ ರಹಿತ ಸಾಲ ಅಥವಾ ಕೃಷಿ ಸಾಲಗಳನ್ನು ಒದಗಿಸುತ್ತಿದೆ. ಸಂಘದಲ್ಲಿ ಯಾರೇ ಆಗಿರಲಿ ಹಣ ದುರುಪಯೋಗ ಮಾಡಿದರೆ ಅವರ ಮೇಲೆ ದಯೆ ತೋರಿಸದೆ ಅವರ ವಿರುದ್ದ ಸಹಕಾರ ಕಾಯಿದೆ 1959 ಹಾಗೂ 1960 ರನ್ವಯ ಸೂಕ್ತಕ್ರಮ ತೆಗೆದುಕೊಳ್ಳಬೇಕು, ಕಿಮಿನಲ್ ಕ್ರಮಗಳ ಪ್ರಕರಣ ದಾಖಲಿಸಬೇಕು. ಹಣ ತೆಗೆದುಕೊಂಡು ದುರುಪಯೋಗ ಮಾಡಿ ಬಡ್ಡಿ ಕಟ್ಟುತ್ತೇವೆ, ಮರುಪಾವತಿಸುತ್ತೇವೆ ಎನ್ನುವವರನ್ನು ನಿರ್ದಾಕ್ಷಿಣವಾಗಿ ಸೇವೆಯಿಂದ ವಜಾಗೊಳಿಸಿ, ವಸೂಲಿ ಮಾಡಿದಾಗ ಸಂಘಗಳ ಏಳ್ಗೆ ಸಾಧ್ಯ ಎಂದು ಹೇಳಿದರು.  ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಜಿ.ಪಿ. ಪಾಟೀಲ ರವರು ಸಹಕಾರಿ ಪಿತಾಮಹ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನೇರವೇರಿಸಿ ಮಾತನಾಡುತ್ತ ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ವಲಯ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಇನ್ನು ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜೀವನಾಡಿಗಳಿವೆ. ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಮಟ್ಟದಲ್ಲಿ ಸದಸ್ಯರಿಗೆ ಬ್ಯಾಂಕಿಂಗ್ ಸೇರಿದಂತೆ ಬಹುವಿಧದ ಸೇವೆಯನ್ನು ನಿಡುವುದಲ್ಲದೇ ಕೃಷಿ ಸಂಬಂಧಿತ ಸಾಲಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿವೆ. ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ಅತ್ಯಂತ ಅಗತ್ಯವಿರುವ ಸೇವಾ ಸಂಸ್ಥೆಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯ ಕಾರ್ಯನಿರ್ವಾಹಕರಾದ ನೀವುಗಳೆಲ್ಲಾ ಸಂಘದ ನಿರ್ವಹಣೆಯಲ್ಲಿ ಉತ್ತಮ ಲೆಕ್ಕಪತ್ರಗಳು, ಸಮಯಕ್ಕೆ ಸರಿಯಾಗಿ ಲೆಕ್ಕಪರಿಶೋಧನೆ ಮಾಡಿಸುವ ಮೂಲಕ ಸಂಘದ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದರು. ಕೆ.ಸಿ.ಸಿ ಬ್ಯಾಂಕ್ ಲಿ., ಧಾರವಾಡ ಅಧ್ಯಕ್ಷರಾದ ಶಿವಕುಮಾರಗೌಡ ಎಸ್‌. ಪಾಟೀಲರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇಶದಾದ್ಯಂತ ಸುಮಾರು 65000 ಕೃಷಿ ಪತ್ತಿನ ಸಹಕಾರ ಸಂಘಗಳು ಕ್ರಿಯಾಶೀಲ ಸೇವೆ ಸಲ್ಲಿಸುತ್ತಿವೆ, ಪ್ಯಾಕ್ಸಗಳಲ್ಲಿ 13 ಕೋಟಿಗೂ ಮೀರಿ ಸದಸ್ಯರಿದ್ದಾರೆ. ಈ ಅಂಕಿ ಅಂಶ ನಮಗೆ ಕೃಷಿ ಪತ್ತಿನ ಸಂಘಗಳ ಅಗತ್ಯತೆಯನ್ನು ವಿವರಿಸುತ್ತದೆ. ಈ ಸಹಕಾರ ಸಂಘಗಳು ಉತ್ತಮವಾಗಿ ನಡೆಸಲು ಹಣಕಾಸಿನ ನಿರ್ವಹಣೆ ತುಂಬಾ ಅವಶ್ಯಕವಗಿದೆ ಪ್ರತಿಯೊಬ್ಬ ಸದಸ್ಯರು ಸಹಕಾರಿ ಬ್ಯಾಂಕುಗಳೂಂದಿಗೆ ವ್ಯವಹರಿಸಿದಾಗ ಇದು ಸಾಧ್ಯವಾಗುತ್ತದೆ. 2012 ರಲ್ಲಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ಆರಂಭಿಸಿದ ಮೇಲೆ ಸಹಕಾರ ಕ್ಷೇತ್ರದ ಬಲವರ್ಧನೆಗೆ ವಲಯವಾರು ತರಬೇತಿ ನೀಡುವ ಮಾದರಿಗಳನ್ನು ಗುರುತಿಸಿ ಅವುಗಳ ಮೂಲಕ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಅಗತ್ಯವಾದ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಯ ಮೂಲಕ ರೈತರ ಆದಾಯವನ್ನು ದ್ವಿಗುಣ ಗೊಳಿಸುವುದು ಸಹಕಾರ ಸಚಿವಾಲಯದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪ್ಯಾಕ್ಸಗಳ ಗಣಕೀಕರಣ ಯೋಜನೆ ಹಾಗೂ ಬಹುಸೇವಾ ಕೇಂದ್ರಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಹೆಚ್ಚಿನ ಒಲವು ನೀಡಲಾಗಿದೆ ಎಂದು ಹೇಳಿದರು.   ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಯುನಿಯನ್ ನಿ., ಗದಗ ಇದರ ಅಧ್ಯಕ್ಷರಾದ ಸಿ.ಎಂ.ಪಾಟೀಲ, ಉಪಾಧ್ಯಕ್ಷರಾದ ವಾಯ್‌.ಎಫ್‌. ಪಾಟೀಲ, ಧಾರವಾಡ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಫ್‌. ಕಲಗುಡಿ, ಜಿ.ವ್ಹಿ. ಪಾಟೀಲ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಸುನಿತಾ ಸಿದ್ರಾಮ ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್‌. ಎಸ್‌. ಕಬಾಡೆ, ಸಹಕಾರ ಸಂಘಗಳ ಲೆಕ್ಕ ಪರಿಶೊಧನಾ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಎನ್‌. ನಾಗಜ್ಜನವರ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳ, ಕೆ.ಸಿ.ಸಿ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎಸ್‌.ವ್ಹಿ. ಹೂಗಾರ, ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವ್ಯಾಪಾರ ಅಭಿವೃಧ್ಧಿ ಯೊಜನೆ ಕುರಿತು ಪ್ರೊ. ಸಿದ್ದು ಯಾಪಲಪರವಿ ನಿವೃತ್ತ ಪ್ರಾಚಾರ್ಯರು, ಕೆ.ವ್ಹಿ.ಎಸ್‌.ಆರ್‌. ಕಾಲೇಜ, ಗದಗ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು, ಕೃಷಿಯಲ್ಲಿ ನ್ಯಾನೋ ಯೂರಿಯಾ ಹಾಗೂ ಡಿ.ಎ.ಪಿ.ಇವುಗಳ ಬಳಕೆ ಕುರಿತು. ಗಣೇಶ ಎಸ್‌.ಎನ್‌. ಫೀಲ್ಡ್‌ ಆಫೀಸರ್, ಇಫ್ಕೋ ಹುಬ್ಬಳ್ಳಿ, ಸಹಕಾರಿ ಕಾಯಿದೆ ಮುಖ್ಯಾಂಶಗಳು ಹಾಗೂ ಪ್ಯಾಕ್ಸಗಳ ಬಲವರ್ಧನೆ ಕುರಿತು, ಎಸ್‌.ಜಿ. ಸುಣಗಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸವಣೂರ ಇವರುಗಳು ಉಪನ್ಯಾಸ ಮಾಡಿದರು.  ಕಾರ್ಯಕ್ರಮದ ಮೊದಲಿಗೆ ಪಿ.ಕೆ.ಪಿ.ಎಸ್‌. ಅಸುಂಡಿ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀದೇವಿ ರಾಮಣ್ಣನವರ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪನವರ ಇವರು ಸ್ವಾಗತಿಸಿ ನಿರೂಪಿಸಿದರು, ಮಹಿಳಾ ಸಹಕಾರ ಶಿಕ್ಷಕಿಯರಾದ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.