ಸ್ಪೀಕರ್ ಅಧಿಕಾರ ಮೊಟಕಾಗಬಾರದು, ಅನರ್ಹರು ಹತ್ತು ವರ್ಷ ಚುನಾವಣೆಗೆಸ್ಪರ್ಧಿಸಬಾರದು- ಸಿದ್ದರಾಮಯ್ಯ

ಬೆಂಗಳೂರು, ಮೇ 28, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸುವ ವಿಷಯಕ್ಕೆ ಸಂಬಂಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದಲ್ಲಿ ವಿಧಾನಸೌಧದಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷದ ಹಿರಿಯ ಸಂಸದೀಯ ನಾಯಕರ ಸಭೆ ನಡೆಯಿತು.ಸಭೆಯಲ್ಲಿ ಕಾಯ್ದೆಯ ಸುಧಾರಣೆ ಹಾಗೂ ಸಂವಿಧಾನದ 1ನೇ ಅನುಚ್ಛೇದ, ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ  ಟಿ ರವಿ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರಾದ  ಕೃಷ್ಣಬೈರೇಗೌಡ, ಅಜಯ್ ಸಿಂಗ್, ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ವೆಂಕರಾವ್ ನಾಡಗೌಡ  ಸೇರಿ ಹಲವರು ಭಾಗಿಯಾಗಿದ್ದರು.
ತಿದ್ದುಪಡಿ ತರುವ ಕುರಿತ ಅಭಿಪ್ರಾಯ ಸಂಗ್ರಹಕ್ಕೆ ಕೇಂದ್ರದಿಂದ ಸಮಿತಿ‌ ರಚನೆಯಾಗಿದ್ದು,    ರಾಜಸ್ಥಾನ ಸ್ಪೀಕರ್ ಡಾ. ಸಿ.ಪಿ. ಜೋಷಿ‌ ಈ ಸಮಿತಿಯ ಅಧ್ಯಕ್ಷರಾಗಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯರಾಗಿದ್ದಾರೆ. ಈ ಸಮಿತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದು, ಈ ಸಮಿತಿಗೆ ಇಂದಿನ ಸಭೆಯಲ್ಲಿ ರಾಜ್ಯದ ಸಂಸದೀಯ ಗಣ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ  ಅಧಿಕಾರ ವಿಧಾನಸಭೆಯ ಅಧ್ಯಕ್ಷರಿಗೇ ಇರಬೇಕು. ಅನರ್ಹಗೊಂಡ ಶಾಸಕರು ಹತ್ತು ವರ್ಷ  ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಯಾವುದೇ ರಾಜಕೀಯ ಅಧಿಕಾರ ಅನುಭವಿಸದಂತೆ  ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವದ ಬೇರುಗಳಿಗೆ ಪಕ್ಷಾಂತರ ಎಂಬುದು ಮಾರಕ. ಆ ಬೇರುಗಳು ಗಟ್ಟಿಯಾಗಿ ಇರಬೇಕಾದರೆ ಪಕ್ಷಾಂತರವೆಂಬ ಪಿಡುಗು ನಿರ್ಮೂಲನೆ ಆಗಬೇಕು ಎಂದು ಹೇಳಿದರು. ಪಕ್ಷಾಂತರ  ನಿಷೇಧ ಕಾಯಿದೆ ಅನ್ವಯ ಪಕ್ಷಾಂತರ ಮಾಡುವ ಶಾಸಕರನ್ನು ಅನರ್ಹಗೊಳಿಸಿ ಸಭಾಧ್ಯಕ್ಷರು  ನೀಡುವ ಆದೇಶದ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ. ಅದು ಸಭಾಧ್ಯಕ್ಷರಿಗೆ ಇರುವ ಅಧಿಕಾರದ ಮೇಲೆ ಗದಾ ಪ್ರಹಾರ ಮಾಡಿದಂತೆ ಎಂದು ತಿಳಿಸಿದರು.
ಸಭಾಧ್ಯಕ್ಷರಿಂದ  ಈ ಅಧಿಕಾರ ಕಸಿದು ಬೇರೆ ಸಂಸ್ಥೆ ಅಥವಾ ವ್ಯಕ್ತಿಗೆ ನೀಡಿದರೆ ನ್ಯಾಯ ಸಿಗುವ ವಿಶ್ವಾಸ  ಇಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅವರು, ಇದು ಸಂವಿಧಾನ ಬಾಹಿರವೂ ಆಗುತ್ತದೆ ಎಂದು  ತಿಳಿಸಿದರು. ಆದರೆ ಅನರ್ಹಗೊಳಿಸುವಂತೆ ಯಾರಾದರೂ ಅರ್ಜಿ  ಸಲ್ಲಿಸಿದರೆ ಆ ಅರ್ಜಿಯನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ನೋಡಿಕೊಳ್ಳಬೇಕು.  ಎರಡು, ಮೂರು ತಿಂಗಳೊಳಗೆ ಅರ್ಜಿ ವಿಲೇವಾರಿ ಆಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ  ತರಬೇಕಾಗಿದೆ ಎಂದರು.
ಪಕ್ಷಾಂತರದ ಮೂಲಕ ಚುನಾಯಿತ  ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ಮತದಾರರಿಗೆ ಮಾಡುವ ದ್ರೋಹ. ಹೀಗಾಗಿ  ಅನರ್ಹರಾದವರು ಹತ್ತು ವರ್ಷ, ಅಂದರೆ ಎರಡು ಅವಧಿಗೆ ಚುನಾವಣೆಗೆ ಸ್ಪರ್ಧೆ ಮಾಡದಂತೆ,  ಜೊತೆಗೆ ಯಾವುದೇ ರೀತಿಯಲ್ಲೂ ರಾಜಕೀಯ ಅಧಿಕಾರ ಅನುಭವಿಸದಂತೆ ನೋಡಿಕೊಳ್ಳಬೇಕಿದೆ. ಅನರ್ಹರಾದವರು  ಮರು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದರೆ ನೈತಿಕತೆ ಎಲ್ಲಿ ಉಳಿಯುತ್ತದೆ. ಹತ್ತು  ವರ್ಷಗಳ ಕಾಲ ಅಂಥವರು ಸದನವನ್ನೇ ಪ್ರವೇಶ ಮಾಡಬಾರದು. ನಿಯಮಾವಳಗಳಲ್ಲಿ ಬದಲಾವಣೆ  ತರುವುದರ ಜೊತೆಗೆ ಚುನಾವಣಾ ಪ್ರಕ್ರಿಯೆಗಳಲ್ಲಿಯೂ ಸುಧಾರಣೆ ತರಬೇಕಿದೆ. ಇಲ್ಲದಿದ್ದರೆ  ಪಕ್ಷಾಂತರದ ಪಿಡುಗನ್ನು ನಿರ್ಮೂಲನೆ ಮಾಡುವುದು ಅಸಾಧ್ಯ ಎಂದು ಸಿದ್ದರಾಮಯ್ಯ ಅವರು  ಹೇಳಿದರು.