ವಿಧಾನಸಭೆ ಕಲಾಪ ಮುಂದೂಡಿಕೆ ಕುರಿತು ಮಧ್ಯಾಹ್ನ ಸದನ ವ್ಯವಹಾರಗಳ ಸಮಿತಿ ಸಭೆಯಲ್ಲಿ ತೀರ್ಮಾನ: ಸ್ಪೀಕರ್

ಬೆಂಗಳೂರು, ಮಾ.23, ವಿಧಾನಸಭೆಯ ಕಲಾಪ ಮುಂದುವರಿಸಬೇಕೇ ಅಥವಾ ಮುಂದೂಡಬೇಕೇ ಎಂಬುದರ ಬಗ್ಗೆ ಇಂದು ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಸದನ ವ್ಯವಹಾರಗಳ ಸಮಿತಿ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಗಿಂದು ತಿಳಿಸಿದರು.
ವಾರದ ರಜೆಯ ಬಳಿಕ ಇಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಸೇರಿದಂತೆ ಕೆಲವು ಸದಸ್ಯರು ಕಲಾಪವನ್ನು ಮುಂದೂಡಲು ಒತ್ತಾಯಿಸಿದರು.
ಆರ್‌.ವಿ.ದೇಶಪಾಂಡೆ ಮಾತನಾಡಿ, ಕೊರೋನಾ ಸೋಂಕು ದಿನದಿಂದ ದಿನಕ್ಕೆ ಎಲ್ಲೆಡೆ ಹರಡುತ್ತಿದೆ. ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ  9 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿದೆ. ಈ ಜಿಲ್ಲೆಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಬಂದ್ ಮಾಡಲಾಗಿವೆ. ಜನರ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ನಾವು ಸದನ ನಡೆಸುವುದು ಸರಿಯಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಆದ್ದರಿಂದ ಸದನ ಮುಂದೂಡಬೇಕು ಎಂದು ಒತ್ತಾಯಿಸಿದರು.
ಆಗ ಸ್ಪೀಕರ್ ಉತ್ತರಿಸಿ, ಇಂದು ಬೆಳಗ್ಗೆ ಹಲವು ಸಚಿವರು, ಶಾಸಕರು ತಮ್ಮನ್ನು ಭೇಟಿಯಾಗಿ ಕಲಾಪ ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದರಿಂದ ಇಂದು ಮಧ್ಯಾಹ್ನ ಮೂರು ಗಂಟೆಗೆ ಸದನ ವ್ಯವಹಾರಗಳ ಸಮಿತಿ ಸಭೆ ಕರೆದಿದ್ದೇನೆ. ಅಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಅದುವರೆಗೂ ಸದಸ್ಯರು ಈ ವಿಷಯದ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.
ಈ ಮಧ್ಯೆ, ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಎದ್ದುನಿಂತು, ಬೆಂಗಳೂರಿನಲ್ಲಿ ಎಲ್ಲಾ ಕಾರ್ಖಾನೆಗಳು ತೆರೆದಿವೆ. ಮಾ.31ನೇ ವರೆಗೆ ಬಂದ್ ಮಾಡುವಂತೆ ಸೂಚನೆ ನೀಡಬೇಕು. ಏನಾದರೂ ಹೆಚ್ಚು ಕಮ್ಮಿ ಆಗುವ ಮೊದಲೇ ಸರ್ಕಾರ ತೀರ್ಮಾನ ಕೈಗೊಳ್ಳಬೇಕು, ಇಷ್ಟು ಗಂಭೀರವಾದ ವಿಷಯ ಕೇಳುವಾಗ ನೀವು ಪ್ರಶ್ನೋತ್ತರ ಕಲಾಪ ತೆಗೆದುಕೊಂಡಿದ್ದೀರಿ, ಈ ಬಗ್ಗೆ ಮಾತನಾಡಲು ಅವಕಾಶ ನೀಡಿ ಎಂದು ಒತ್ತಾಯಿಸಿದರು. ಆದರೆ ಸ್ಪೀಕರ್ ಮಾತನಾಡಲು ಅವಕಾಶ ನೀಡಲಿಲ್ಲ. ಇದಕ್ಕೂ ಮೊದಲು ಸ್ಪೀಕರ್ ಮಾತನಾಡಿ, ನಿನ್ನೆ ರಾಜ್ಯದ ಜನತೆಗೆ ಜನತಾ ಕರ್ಫ್ಯೂ ಯಶಸ್ವಿಗೊಳಿಸಿದ್ದಕ್ಕಾಗಿ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಭಯಾನಕ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ, ದೇಶದ ಜನ ಸ್ವಯಂಪ್ರೇರಣೆಯಿಂದ ಜನತಾ ಕರ್ಫ್ಯೂಗೆ ಪ್ರಧಾನಿ ಕರೆ ನೀಡಿದ್ದರು. ಮುಂದಿನ ದಿನಗಳಲ್ಲಿ ಯಾವ ರೀತಿಯ ಮುಂಜಾಗೃತಾ ಕ್ರಮಕೈಗೊಳ್ಳಬೇಕು ಎಂದು ಹೇಳುತ್ತದೆಯೋ ಅವೆಲ್ಲವನ್ನೂ ನಾವು ಪಾಲಿಸಬೇಕು ಎಂದು ಹೇಳಿದರು.