ನವದೆಹಲಿ , ಡಿ 25 'ನಾಲ್ಕು ಬಲಿಷ್ಟ ತಂಡಗಳ ಸೂಪರ್ ಸೀರೀಸ್' ಕ್ರಿಕೆಟ್ ಸರಣಿ ಆಯೋಜಿಸುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆಲೋಚನೆಯನ್ನು ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಶೀದ್ ಲತೀಫ್ 'ಫ್ಲಾಪ್ ಐಡಿಯಾ' ಎಂದು ಟೀಕಿಸಿದ್ದಾರೆ.ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಜತೆಗೆ ಮತ್ತೊಂದು ಬಲಿಷ್ಟ ತಂಡ ಸೇರಿಸಿಕೊಂಡು 'ನಾಲ್ಕು ತಂಡಗಳ ಸೀರೀಸ್' ಆಯೋಜನೆಗೆ ಬಗ್ಗೆ ದಾದಾ ಪ್ರಸ್ತಾಪಿಸಿದ್ದರು."ಇಂಥ ಸರಣಿಯನ್ನು ಆಯೋಜನೆ ಮಾಡುವುದರಿಂದ ಈ ನಾಲ್ಕು ತಂಡಗಳು ಜಗತ್ತಿನ ಉಳಿದ ತಂಡಗಳನ್ನು ಮೂಲೆಗುಂಪಾಗಿಸುವ ಲೆಕ್ಕಾಚಾರ ಹೊಂದಿದೆ. ಇದು ಒಳ್ಳೆಯದಲ್ಲ. 'ಬಿಗ್ ತ್ರೀ' ಆಲೋಚನೆಯು 'ಫ್ಲಾಪ್ ಐಡಿಯಾ' ಆಗಿದೆ. ಈ ಮೊದಲು ಕೂಡ ಇದೇ ರೀತಿಯ ಆಲೋಚನೆ ಮಾಡಲಾಗಿತ್ತು," ಎಂದು ರಶೀದ್ ಲತೀಫ್ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಕಿಡಿ ಕಾರಿದ್ದಾರೆ.ನಾಲ್ಕು ರಾಷ್ಟ್ರಗಳನ್ನು ಒಳಗೊಂಡ ಕ್ರಿಕೆಟ್ ಸರಣಿಯ ಆಯೋಜನೆ ಕುರಿತಾಗಿ ಬಿಸಿಸಿಐ ಜೊತೆಗೆ ಮಾತುಕತೆ ನಡೆಸಿರುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ಹೇಳಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಎದುರು ಚರ್ಚಿಸುವುದಾಗಿ ಹೇಳಿದೆ.ಸೌರವ್ ಗಂಗೂಲಿ ಆಲೋಚನೆಗೆ ಐಸಿಸಿ ಸಮ್ಮತಿಸಿದರೆ 2021ರಿಂದ 4 ತಂಡಗಳನ್ನು ಒಳಗೊಂಡ ಚತುಷ್ಕೋನ ಸರಣಿ ಶುರುವಾಗಲಿದೆ. ಆದರೆ, 3ಕ್ಕಿಂತಲೂ ಹೆಚ್ಚು ತಂಡಗಳನ್ನು ಒಳಗೊಂಡ ಸರಣಿಗಳಿಗೆ ಐಸಿಸಿ ಸಮ್ಮತಿಸುವುದಿಲ್ಲ. ಹೀಗಾಗಿ ಈ ಹೊಸ ಮಾದರಿಯ ಸರಣಿ ಆರಂಭ ಕುರಿತಾಗಿ ಸಾಕಷ್ಟು ಚರ್ಚೆಯಾಗುವುದು ಬಾಕಿ ಇದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಪಂದ್ಯಾವಳಿ ಬಗ್ಗೆ ಮಾತನಾಡಿದ್ದಾರೆ, ಇಸಿಬಿ ಕೂಡ ಈ ತಿಂಗಳ ಆರಂಭದಲ್ಲಿ ನಡೆದ ಚರ್ಚೆಯಲ್ಲಿ ಒಪ್ಪಿಕೊಂಡಿದೆ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಯೋಜನೆ ಜಾರಿಗೆ ಬಂದರೆ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಹೆಚ್ಚು ಪ್ರೇಕ್ಷಕರು ಹರಿದು ಬರಲಿದ್ದಾರೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯ ಪಟ್ಟಿದ್ದಾರೆ.