ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

ನವದೆಹಲಿ, ಅ. 27:     ದೀಪಾವಳಿ ಸಮಯದಲ್ಲೆ ಕೇಂದ್ರ ಸರ್ಕಾರಕ್ಕೆ ರಾಜಧರ್ಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೆನೆಪಿಸಿಕೊಟ್ಟಿದ್ದಾರೆ.  "ರೈತರು ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಪರಿಣಾಮ ಕರಾಳ ದೀಪಾವಳಿ ಆಚರಿಸುವಂತಾಗಿದೆ. ರೈತರಿಗೆ ನ್ಯಾಯಬದ್ಧ ಬೆಲೆ ದೊರಕಿಸಿಕೊಡುವುದು ಕೇಂದ್ರ ಸರ್ಕಾರದ ರಾಜಧರ್ಮ, ಮೇಲಾಗಿ ಕರ್ತವ್ಯ ಎಂದೂ ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರೈತರ ಕೃಷಿ  ವೆಚ್ಚಕ್ಕಿಂತ ಶೇಕಡ 50ರಷ್ಟು ಹೆಚ್ಚಿನ  ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿಪಡಿಸುವ ಭರವಸೆಯನ್ನು ಮೋದಿ ಸರ್ಕಾರ 2018ರಲ್ಲಿ ನೀಡಿತ್ತು. ಕೆಲ ಮಧ್ಯವರ್ತಿಗಳು ರೈತರನ್ನು ಶೋಷಿಸುತ್ತಿದ್ದಾರೆ ಎಂದೂ  ಹೇಳಿತ್ತು. ಆದರೆ ಮುಂಗಾರು ಬೆಳೆಗಳನ್ನು ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಶೇಕಡ 22.ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಸುಮಾರು 50 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ, ಇದನ್ನು ಯಾರು ಪಾವತಿಸುತ್ತಾರೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೃಷಿ ಸಲಕರಣೆಗಳ ಮೇಲಿನ ಜಿಎಸ್ಟಿ ಹೆಚ್ಚಳ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ  ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಹೊಡೆತ ನೀಡಿದೆ ಎಂದು ಸೋನಿಯಾ ವಾಗ್ದಾಳಿ ಮಾಡಿದ್ದಾರೆ